
ನವದೆಹಲಿ, 23 ಜೂನ್ (ಹಿ.ಸ.) :
ಆ್ಯಂಕರ್ : ಜಾಗತಿಕ ಉದ್ವಿಗ್ನತೆ ಹಾಗೂ ಹೋರ್ಮುಜ್ ಜಲಸಂಧಿಯ ಸುತ್ತಲಿನ ಅನಿಶ್ಚಿತತೆಯ ನಡುವೆಯೂ ಭಾರತಕ್ಕೆ ಸಮಾಧಾನಕರ ಸುದ್ದಿಯೊಂದು ಲಭ್ಯವಾಗಿದೆ. ಯೂರಿಯಾ, ಡೈ-ಅಮೋನಿಯಂ ಫಾಸ್ಫೇಟ್ (ಡಿಎಪಿ) ಹಾಗೂ ಸಲ್ಫರ್ ಸಾಗಿಸುತ್ತಿದ್ದ ನಾಲ್ಕು ಸರಕು ಹಡಗುಗಳು ಕಳೆದ ವಾರ ಯಶಸ್ವಿಯಾಗಿ ಹೋರ್ಮುಜ್ ಜಲಸಂಧಿಯನ್ನು ದಾಟಿ ಭಾರತೀಯ ಬಂದರುಗಳತ್ತ ಪ್ರಯಾಣಿಸುತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರ ಸರ್ಕಾರದ ಅಧಿಕೃತ ಪ್ರಕಟಣೆಯ ಪ್ರಕಾರ, ಈ ಹಡಗುಗಳು ಸುರಕ್ಷಿತವಾಗಿ ಹೋರ್ಮುಜ್ ಜಲಸಂಧಿಯನ್ನು ದಾಟಿದ್ದು, ಕೃಷ್ಣಪಟ್ಟಣಂ, ಕಾಕಿನಾಡ, ಪಾರದೀಪ್ ಮತ್ತು ಮುಂದ್ರಾ ಬಂದರುಗಳಿಗೆ ತಲುಪಲಿವೆ. ಬಂದರುಗಳಿಗೆ ಆಗಮಿಸಿದ ತಕ್ಷಣ ಗೊಬ್ಬರವನ್ನು ತ್ವರಿತವಾಗಿ ಇಳಿಸಿ ರೈತರಿಗೆ ಸಮಯಕ್ಕೆ ಸರಿಯಾಗಿ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.
ಜೂನ್ 22ರ ವೇಳೆಗೆ ದೇಶದಲ್ಲಿ ಒಟ್ಟು 196.08 ಲಕ್ಷ ಟನ್ ಗೊಬ್ಬರದ ದಾಸ್ತಾನು ಲಭ್ಯವಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿದ್ದ 168.67 ಲಕ್ಷ ಟನ್ಗೆ ಹೋಲಿಸಿದರೆ ಗಮನಾರ್ಹ ಏರಿಕೆಯಾಗಿದೆ. ಪ್ರಸ್ತುತ ದಾಸ್ತಾನಿನಲ್ಲಿ 81.44 ಲಕ್ಷ ಟನ್ ಯೂರಿಯಾ, 20.92 ಲಕ್ಷ ಟನ್ ಡಿಎಪಿ, 55.91 ಲಕ್ಷ ಟನ್ ಎನ್ಪಿಕೆ, 12.68 ಲಕ್ಷ ಟನ್ ಎಂಒಪಿ ಹಾಗೂ 25.13 ಲಕ್ಷ ಟನ್ ಎಸ್ಎಸ್ಪಿ ಸೇರಿವೆ.
ಇನ್ನೊಂದೆಡೆ, ಕೃಷಿ ಚಟುವಟಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗೊಬ್ಬರದ ಬೇಡಿಕೆಯೂ ಏರಿಕೆಯಾಗಿದೆ. ಈ ವರ್ಷದ ಮಾರ್ಚ್ 1ರಿಂದ ಜೂನ್ 21ರವರೆಗೆ 153.4 ಲಕ್ಷ ಟನ್ ಗೊಬ್ಬರ ಮಾರಾಟ ದಾಖಲಾಗಿದ್ದು, ಕಳೆದ ವರ್ಷದ ಇದೇ ಅವಧಿಯ 140.2 ಲಕ್ಷ ಟನ್ಗಿಂತ 13.2 ಲಕ್ಷ ಟನ್ ಹೆಚ್ಚು ಮಾರಾಟವಾಗಿದೆ.
ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆಗಳಿಂದ ಭಾರತೀಯ ರೈತರನ್ನು ರಕ್ಷಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ದೇಶೀಯ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸುವ ಜೊತೆಗೆ ಅಗತ್ಯ ಪ್ರಮಾಣದ ಆಮದುಗಳಿಗೂ ಉತ್ತೇಜನ ನೀಡಿದೆ. ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಬಳಿಕ ದೇಶೀಯ ಉತ್ಪಾದನೆ 133.12 ಲಕ್ಷ ಮೆಟ್ರಿಕ್ ಟನ್ ಮಟ್ಟ ತಲುಪಿದ್ದು, ಇದೇ ಅವಧಿಯಲ್ಲಿ ಭಾರತೀಯ ಬಂದರುಗಳಿಗೆ 43.69 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಆಮದು ಆಗಿದೆ.
ಯೂರಿಯಾ ಪೂರೈಕೆಯನ್ನು ಒಮಾನ್, ಮಲೇಷ್ಯಾ, ವಿಯೆಟ್ನಾಂ, ಜಾರ್ಜಿಯಾ, ನೈಜೀರಿಯಾ, ರಷ್ಯಾ, ಫಿನ್ಲ್ಯಾಂಡ್, ಈಜಿಪ್ಟ್, ಅಲ್ಜೀರಿಯಾ, ಟರ್ಕಿಯೆ ಹಾಗೂ ನೆದರ್ಲ್ಯಾಂಡ್ಸ್ ದೇಶಗಳಿಂದ ಖಚಿತಪಡಿಸಿಕೊಳ್ಳಲಾಗಿದೆ. ಡಿಎಪಿ ಹಾಗೂ ಎನ್ಪಿಕೆ ಗೊಬ್ಬರಗಳ ಪೂರೈಕೆಯನ್ನು ರಷ್ಯಾ, ಮೊರಾಕೊ, ಈಜಿಪ್ಟ್, ಅಮೆರಿಕ, ಜೋರ್ಡನ್, ದಕ್ಷಿಣ ಕೊರಿಯಾ, ಟುನೀಶಿಯಾ ಹಾಗೂ ಸೌದಿ ಅರೇಬಿಯಾ ದೇಶಗಳಿಂದ ಕೆಂಪು ಸಮುದ್ರ ಮಾರ್ಗದ ಮೂಲಕ ನಿರಂತರವಾಗಿ ನಡೆಸಲಾಗುತ್ತಿದೆ.
ದೇಶದಲ್ಲಿ ಗೊಬ್ಬರದ ಸಮರ್ಪಕ ದಾಸ್ತಾನು ಲಭ್ಯವಿರುವುದರಿಂದ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.