ಅಮೆರಿಕದ ವ್ಯಾಪಾರ ಒಪ್ಪಂದ ರೈತರಿಗೆ ಹಾನಿಕಾರಕ : ಜೈರಾಮ್ ರಮೇಶ್
ನವದೆಹಲಿ, 23 ಜೂನ್ (ಹಿ.ಸ.) : ಆ್ಯಂಕರ್ : ಅಮೆರಿಕದೊಂದಿಗೆ ಪ್ರಸ್ತಾಪಿತ ವ್ಯಾಪಾರ ಒಪ್ಪಂದವು ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾಗಿದ್ದು, ದೇಶದ ವಿವಿಧ ರಾಜ್ಯಗಳ ರೈತರಿಗೆ ಗಂಭೀರ ಹಾನಿ ಉಂಟುಮಾಡುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಎಚ್ಚರಿಕೆ ನೀಡಿದ್ದ
ಜೈರಾಮ್ ರಮೇಶ್


ನವದೆಹಲಿ, 23 ಜೂನ್ (ಹಿ.ಸ.) :

ಆ್ಯಂಕರ್ : ಅಮೆರಿಕದೊಂದಿಗೆ ಪ್ರಸ್ತಾಪಿತ ವ್ಯಾಪಾರ ಒಪ್ಪಂದವು ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾಗಿದ್ದು, ದೇಶದ ವಿವಿಧ ರಾಜ್ಯಗಳ ರೈತರಿಗೆ ಗಂಭೀರ ಹಾನಿ ಉಂಟುಮಾಡುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ಒತ್ತಡಕ್ಕೆ ಮಣಿದು ಯಾವುದೇ ಪ್ರತಿಕೂಲ ಒಪ್ಪಂದಕ್ಕೆ ಸಹಿ ಹಾಕಬಾರದು ಹಾಗೂ ಈ ವಿಷಯದಲ್ಲಿ ಮಲೇಷ್ಯಾದ ನಿಲುವಿನಿಂದ ಕೇಂದ್ರ ಸರ್ಕಾರ ಪಾಠ ಕಲಿಯಬೇಕು ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಜೈರಾಮ್ ರಮೇಶ್, ಭಾರತ ಸೇರಿದಂತೆ ಸುಮಾರು 60 ರಾಷ್ಟ್ರಗಳು ಅಮೆರಿಕದ ವ್ಯಾಪಾರ ಕಾನೂನು ಉಲ್ಲಂಘನೆ ಸಂಬಂಧದ ತನಿಖೆಯ ವ್ಯಾಪ್ತಿಯಲ್ಲಿವೆ ಎಂದು ತಿಳಿಸಿದ್ದಾರೆ. ಈ ತನಿಖೆಯ ಅಂತಿಮ ವರದಿ ಕೆಲವೇ ವಾರಗಳಲ್ಲಿ ಹೊರಬರುವ ಸಾಧ್ಯತೆ ಇದೆ ಎಂದಿದ್ದಾರೆ.

ಅಮೆರಿಕವು ವ್ಯಾಪಾರ ಒಪ್ಪಂದಗಳಲ್ಲಿ ಸ್ಪಷ್ಟ ಭರವಸೆಗಳನ್ನು ನೀಡುವುದಿಲ್ಲ. ಆದರೆ ಭಾರತವು ಅಮೆರಿಕದಿಂದ ಆಮದುಗಳನ್ನು ಕನಿಷ್ಠ ಮೂರು ಪಟ್ಟು ಹೆಚ್ಚಿಸುವಂತಹ ಬದ್ಧತೆಗಳನ್ನು ಒಪ್ಪಿಕೊಳ್ಳಬೇಕಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಚೀನಾ ವಿಚಾರದಲ್ಲಿ ಎತ್ತಿದ ಪ್ರಶ್ನೆಗಳ ಒತ್ತಡದ ನಡುವೆ ಅಮೆರಿಕದೊಂದಿಗೆ ಜಂಟಿ ಪ್ರಕಟಣೆಗೆ ಸಹಿ ಹಾಕಿದ್ದರು ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ.

ಆ ಪ್ರಕಟಣೆಯ ಪ್ರಕಾರ ಅಮೆರಿಕವು ಭಾರತೀಯ ರಫ್ತುಗಳ ಮೇಲಿನ ಸುಂಕವನ್ನು 25 ಶೇಕಡೆಯಿಂದ 18 ಶೇಕಡೆಗೆ ಇಳಿಸುವ ಭರವಸೆ ನೀಡಿದ್ದರೆ, ಭಾರತವು ಅಮೆರಿಕದ ಕೃಷಿ ಮತ್ತು ಕೈಗಾರಿಕಾ ಉತ್ಪನ್ನಗಳ ಮೇಲಿನ ಸುಂಕವನ್ನು ರದ್ದುಪಡಿಸುವ ಅಥವಾ ಭಾರೀ ಪ್ರಮಾಣದಲ್ಲಿ ಕಡಿತಗೊಳಿಸುವುದಕ್ಕೆ ಹಾಗೂ ಐದು ವರ್ಷಗಳಲ್ಲಿ 500 ಬಿಲಿಯನ್ ಡಾಲರ್ ಮೌಲ್ಯದ ಅಮೆರಿಕನ್ ಉತ್ಪನ್ನಗಳನ್ನು ಖರೀದಿಸುವ ಬದ್ಧತೆಯನ್ನು ತೋರಿಸಿತ್ತು ಎಂದು ಅವರು ಹೇಳಿದ್ದಾರೆ.

ಇದರ ನಡುವೆ, ಫೆಬ್ರುವರಿ 20ರಂದು ಅಮೆರಿಕದ ಸುಪ್ರೀಂ ಕೋರ್ಟ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪರಸ್ಪರ ಸುಂಕ (ರೆಸಿಪ್ರೋಕಲ್ ಟ್ಯಾರಿಫ್) ನೀತಿಯನ್ನು ಕಾನೂನುಬಾಹಿರ ಎಂದು ಘೋಷಿಸಿದ ಬಳಿಕ, ಭಾರತಕ್ಕೆ ನೀಡಲಾಗಿದ್ದ ಸುಂಕದ ರಿಯಾಯಿತಿಗಳು ತಕ್ಷಣವೇ ಅಮಾನ್ಯವಾದವು ಎಂದು ರಮೇಶ್ ಹೇಳಿದ್ದಾರೆ. ನಂತರ ಅಮೆರಿಕವು ಭಾರತ ಸೇರಿದಂತೆ ತನ್ನ ಎಲ್ಲ ವ್ಯಾಪಾರ ಪಾಲುದಾರ ರಾಷ್ಟ್ರಗಳ ಮೇಲೆ ತಾತ್ಕಾಲಿಕವಾಗಿ 10 ಶೇಕಡಾ ಸುಂಕ ವಿಧಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಜಪಾನ್ ಮತ್ತು ಯುರೋಪಿಯನ್ ಒಕ್ಕೂಟದೊಂದಿಗೆ ವ್ಯಾಪಾರ ಒಪ್ಪಂದಗಳಿದ್ದರೂ ಸಹ ಅಮೆರಿಕವು ಹೆಚ್ಚುವರಿ ಸುಂಕ ವಿಧಿಸುವ ಬೆದರಿಕೆ ಹಾಕಿರುವುದನ್ನು ಉಲ್ಲೇಖಿಸಿದ ಅವರು, ದೇಶದ ಹಿತಾಸಕ್ತಿಗಳಿಗೆ ಧಕ್ಕೆಯಾಗುವ ಯಾವುದೇ ವ್ಯಾಪಾರ ಒಪ್ಪಂದಕ್ಕೆ ಭಾರತ ಸಹಿ ಹಾಕಬಾರದು ಎಂದು ಒತ್ತಾಯಿಸಿದರು.

ಮಲೇಷ್ಯಾ ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಅಮೆರಿಕದೊಂದಿಗೆ ಪ್ರಸ್ತಾಪಿತ ವ್ಯಾಪಾರ ಒಪ್ಪಂದವನ್ನು ತಿರಸ್ಕರಿಸಿರುವುದನ್ನು ಉದಾಹರಣೆಯಾಗಿ ನೀಡಿದ ಜೈರಾಮ್ ರಮೇಶ್, ಕೇಂದ್ರ ಸರ್ಕಾರವು ಅದರಿಂದ ಪಾಠ ಕಲಿತು ರೈತರ ಹಾಗೂ ದೇಶದ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande