ಯೋಗ ಆತ್ಮದ ಸಮ್ಮಿಲನದ ದಿವ್ಯ ಪ್ರಕ್ರಿಯೆ : ಪ್ರಹ್ಲಾದ ಜೋಶಿ
ಬೆಳಗಾವಿ, 21 ಜೂನ್ (ಹಿ.ಸ.) : ಆ್ಯಂಕರ್ : 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಬೆಳಗಾವಿಯ ಸುವರ್ಣ ವಿಧಾನ ಸೌಧ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಆಯುಷ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಯಿತು. ಕೇಂದ್ರ ಸಚಿವ ಪ್ರಹ್
ಬೆಳಗಾವಿಯಲ್ಲಿ ಜೋಶಿ ಯೋಗಾಭ್ಯಾಸ


ಬೆಳಗಾವಿ, 21 ಜೂನ್ (ಹಿ.ಸ.) :

ಆ್ಯಂಕರ್ : 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಬೆಳಗಾವಿಯ ಸುವರ್ಣ ವಿಧಾನ ಸೌಧ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಆಯುಷ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಯಿತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಗವದ್ಗೀತೆಯ ಎರಡನೇ ಅಧ್ಯಾಯದ 50ನೇ ಶ್ಲೋಕದಲ್ಲಿರುವ “ಯೋಗಃ ಕರ್ಮಸು ಕೌಶಲಮ್” ಎಂಬ ಸಂದೇಶವನ್ನು ಉಲ್ಲೇಖಿಸಿ, ಕೆಲಸದಲ್ಲಿ ನಿಪುಣತೆಯೇ ಯೋಗವಾಗಿದ್ದು, ಯೋಗ ಕೇವಲ ದೈಹಿಕ ವ್ಯಾಯಾಮವಲ್ಲ; ಅದು ದೇಹ, ಮನಸ್ಸು ಮತ್ತು ಆತ್ಮದ ಸಮ್ಮಿಲನದ ದಿವ್ಯ ಪ್ರಕ್ರಿಯೆಯಾಗಿದೆ ಎಂದು ಹೇಳಿದರು.

ಜೂನ್ 21 ಪ್ರಕೃತಿಯ ದೃಷ್ಟಿಯಿಂದಲೂ ವಿಶೇಷ ದಿನವಾಗಿದ್ದು, ವರ್ಷದ ಅತ್ಯಂತ ದೀರ್ಘ ಹಗಲಿನ ದಿನ ಹಾಗೂ ಬೇಸಿಗೆ ಆಯನ ಸಂಕ್ರಾಂತಿಯ ಪರ್ವಕಾಲವಾಗಿದೆ. ಆದಿಶಿವನು ಸಪ್ತರ್ಷಿಗಳಿಗೆ ಯೋಗಜ್ಞಾನವನ್ನು ಬೋಧಿಸಲು ಆರಂಭಿಸಿದ ಪವಿತ್ರ ಇತಿಹಾಸವನ್ನು ಈ ದಿನ ಹೊಂದಿದೆ ಎಂದು ಅವರು ತಿಳಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದ ಫಲವಾಗಿ ಯೋಗ ಇಂದು ಜಾಗತಿಕ ಜನಾಂದೋಲನವಾಗಿ ಬೆಳೆದಿದ್ದು, ವಿಶ್ವದ 195 ರಾಷ್ಟ್ರಗಳು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿವೆ. ಇದರಿಂದ ಕೋಟ್ಯಂತರ ಜನರು ಆರೋಗ್ಯ ಮತ್ತು ಯೋಗದ ಸಂದೇಶದಡಿ ಒಂದೇ ವೇದಿಕೆಯಲ್ಲಿ ಒಂದಾಗಿದ್ದಾರೆ ಎಂದು ಪ್ರಹ್ಲಾದ ಜೋಶಿ ಹೇಳಿದರು.

ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು “ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ” ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಆರೋಗ್ಯಕರ, ಸದೃಢ ಹಾಗೂ ಸಕ್ರಿಯ ಜೀವನ ನಡೆಸಲು ಯೋಗ ಅತ್ಯಂತ ಪರಿಣಾಮಕಾರಿ ಸಾಧನವಾಗಿದ್ದು, ಪ್ರತಿಯೊಬ್ಬರೂ ತಮ್ಮ ದಿನಚರಿಯಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ಅಭಯ ಪಾಟೀಲ, ಮಹಾಪೌರ ಪ್ರೀತಿ ಕಾಮಕರ, ಉಪಮಹಾಪೌರ ಹನುಮಂತ ಕೊಂಗಲ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಆಯುಕ್ತ ಬೊರಸೆ ಭೂಷಣ್ ಗುಲಾಬರಾವ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂದೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್ ಎಂ., ಜಿಲ್ಲಾ ಆಯುಷ್ ಅಧಿಕಾರಿ ಡಾ. ಶ್ರೀಕಾಂತ್ ಸುಣಧೋಳಿ ಸೇರಿದಂತೆ ಹಲವು ಗಣ್ಯರು ಹಾಗೂ ನೂರಾರು ಯೋಗಾಸಕ್ತರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande