ರೀಲ್ಸ್ ಗಳಿಂದ ಸಮಸ್ಯೆ ಪರಿಹಾರವಾಗುವುದಿಲ್ಲ : ಆರ್. ಅಶೋಕ್ ವಾಗ್ದಾಳಿ
ಸಮಸ್ಯೆ ಗ
ಅಶೋಕ


ಬೆಂಗಳೂರು, 21 ಜೂನ್ (ಹಿ.ಸ.) :

ಆ್ಯಂಕರ್ : ಅಧಿಕಾರಿಗಳನ್ನು ಬೈದು, ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದರೆ ಬೆಂಗಳೂರಿನ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೆಗೌಡ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳ ಮೇಲೆ ಕ್ಯಾಮೆರಾ ಮುಂದೆ ಗರಂ ಆಗಿ ಮಾತನಾಡಿ, ಅದರ ವಿಡಿಯೊಗಳನ್ನು ರೀಲ್ಸ್ ರೂಪದಲ್ಲಿ ಹಂಚಿಕೊಳ್ಳುತ್ತಿರುವುದನ್ನು ಟೀಕಿಸಿದ ಅಶೋಕ್, “ಇಂತಹ ಚೀಪ್ ಪಬ್ಲಿಸಿಟಿ ಗಿಮಿಕ್ಗಳನ್ನು ನೋಡಿ ಜನರು ಈಗ ನಗುತ್ತಿದ್ದಾರೆ. ನಿಮ್ಮನ್ನು ‘ರೀಲ್ಸ್ ಮಂತ್ರಿ’ ಎಂದು ಕರೆಯುತ್ತಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.

ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿ ಮತ್ತು ದುರಸ್ತಿ ಕಾಮಗಾರಿಗಳಿಗಾಗಿ ಸರ್ಕಾರ ಘೋಷಿಸಿರುವ ₹2,000 ಕೋಟಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಜನರ ನಿತ್ಯದ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕಾಗಿದೆ ಎಂದು ಅವರು ಆಗ್ರಹಿಸಿದರು. ಎಸಿ ಕೊಠಡಿಯಲ್ಲಿ ಕುಳಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಬದಲು, ನೆಲಮಟ್ಟದಲ್ಲಿ ಕೆಲಸ ಮಾಡುವ ಮೂಲಕ ಫಲಿತಾಂಶ ತೋರಿಸಬೇಕು ಎಂದು ಸಲಹೆ ನೀಡಿದರು.

ಮಳೆಗಾಲ ಆರಂಭವಾಗುವ ಮುನ್ನ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೆ, ಈಗ ಪ್ರಚಾರಕ್ಕಾಗಿ ಅಧಿಕಾರಿಗಳನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಳ್ಳುವ ನಾಟಕ ನಡೆಯುತ್ತಿದೆ ಎಂದು ಆರೋಪಿಸಿದ ಅಶೋಕ್, ಇದರಿಂದ ಜನರ ಸಮಸ್ಯೆಗಳಿಗೆ ಯಾವುದೇ ಪರಿಹಾರ ಸಿಗುವುದಿಲ್ಲ ಎಂದು ಹೇಳಿದರು.

ವೈಟ್ಫೀಲ್ಡ್ ಪ್ರದೇಶದಲ್ಲಿ ರಸ್ತೆಗಳಲ್ಲಿ ನಿಂತಿರುವ ನೀರು, ಮಲ್ಲೇಶ್ವರಂ ಹಾಗೂ ಯಶವಂತಪುರ ಭಾಗಗಳಲ್ಲಿ ಅಪಾಯಕಾರಿಯಾಗಿ ಬಾಯಿ ತೆರೆದು ನಿಂತಿರುವ ಫುಟ್ಪಾತ್ ಸ್ಲ್ಯಾಬ್ಗಳಂತಹ ಸಮಸ್ಯೆಗಳು ರೀಲ್ಸ್ಗಳಿಂದ ಸರಿಯಾಗುವುದಿಲ್ಲ ಎಂದು ಅವರು ಟೀಕಿಸಿದರು.

“ಕ್ಯಾಮೆರಾ ಮುಂದೆ ಪೋಸ್ ಕೊಡುವುದನ್ನು ನಿಲ್ಲಿಸಿ, ಗ್ರೌಂಡ್ ರಿಯಾಲಿಟಿಯಲ್ಲಿ ಕೆಲಸ ಮಾಡಿ. ಬಿಡುಗಡೆಯಾದ ₹2,000 ಕೋಟಿ ಅನುದಾನವನ್ನು ದುರ್ಬಳಕೆ ಆಗದಂತೆ ನೋಡಿಕೊಂಡು, ಕಾಮಗಾರಿಗಳನ್ನು ಪ್ರಾಮಾಣಿಕವಾಗಿ ಪೂರ್ಣಗೊಳಿಸಿ. ಬೆಂಗಳೂರಿನ ಜನತೆಗೆ ಬೇಕಿರುವುದು ಸಾಮಾಜಿಕ ಜಾಲತಾಣದ ರೀಲ್ಸ್ಗಳಲ್ಲ, ಕಣ್ಣಿಗೆ ಕಾಣುವ ಶಾಶ್ವತ ಪರಿಹಾರ” ಎಂದು ಅಶೋಕ್ ತಮ್ಮ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande