
ಬೆಂಗಳೂರು, 20 ಜೂನ್ (ಹಿ.ಸ.) :
ಆ್ಯಂಕರ್ : ಎತ್ತಿನಹೊಳೆ ಯೋಜನೆ ಹೆಸರಿನಲ್ಲಿ ರಾಜ್ಯ ಸರ್ಕಾರ ಮತ್ತೊಮ್ಮೆ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನತೆಗೆ ಮೋಸ ಮಾಡುತ್ತಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೆಯ ರೆಡ್ಡಿ ಆರ್ ತೀವ್ರ ಆರೋಪ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯನ್ನು ಕೇವಲ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಿ, ಲವಣಾಂಶಗಳಿಂದ ಕಲುಷಿತಗೊಂಡಿರುವ ಅಂತರ್ಜಲವನ್ನು ಕುಡಿಯುವ ಅನಿವಾರ್ಯತೆಯಿಂದ ಬಳಲುತ್ತಿರುವ ಬರಪೀಡಿತ ಜಿಲ್ಲೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ನಂತರದಲ್ಲಿ ಯೋಜನೆಯನ್ನು ಬೆಂಗಳೂರು ನಗರ ಸೇರಿದಂತೆ ಒಟ್ಟು ಏಳು ಜಿಲ್ಲೆಗಳಿಗೆ ವಿಸ್ತರಿಸಿ ಮೂಲ ಉದ್ದೇಶವನ್ನೇ ದುರ್ಬಲಗೊಳಿಸಲಾಗಿದೆ ಎಂದು ಟೀಕಿಸಿದ್ದಾರೆ.
ಕೇಂದ್ರೀಯ ಜಲ ಆಯೋಗ , ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಹಲವು ವೈಜ್ಞಾನಿಕ ಸಂಸ್ಥೆಗಳ ಅಧ್ಯಯನ ವರದಿಗಳು ಎತ್ತಿನಹೊಳೆ ಯೋಜನೆಯಲ್ಲಿ ಲಭ್ಯವಿರುವ ನೀರಿನ ಪ್ರಮಾಣ ಕೇವಲ 8 ಟಿಎಂಸಿ ಎಂದು ಸ್ಪಷ್ಟಪಡಿಸಿದ್ದರೂ, ಸರ್ಕಾರ ಅದನ್ನು ಕಡೆಗಣಿಸಿ ನೀರಿನ ಹಂಚಿಕೆಯನ್ನು 24 ಟಿಎಂಸಿಗೆ ಹೆಚ್ಚಿಸಿದೆ ಎಂದು ಅವರು ಆರೋಪಿಸಿದ್ದಾರೆ. ಜೊತೆಗೆ ಯೋಜನಾ ವೆಚ್ಚವನ್ನೂ ₹8 ಸಾವಿರ ಕೋಟಿಯಿಂದ ₹24 ಸಾವಿರ ಕೋಟಿಗೆ ಏರಿಸುವ ಮೂಲಕ ಸಾರ್ವಜನಿಕರ ತೆರಿಗೆ ಹಣವನ್ನು ವ್ಯರ್ಥ ಮಾಡಲಾಗಿದೆ ಎಂದು ದೂರಿದ್ದಾರೆ.
ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಅವರು ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಎತ್ತಿನಹೊಳೆ ಯೋಜನೆಯ ನೀರಿನ ಇಳುವರಿ 8 ಟಿಎಂಸಿಗೆ ಇಳಿದಿರುವುದಾಗಿ ವಿಧಾನಸಭೆಯಲ್ಲಿಯೇ ಉತ್ತರಿಸಿದ್ದರು. ಆದರೂ ಕೆಲ ರಾಜಕಾರಣಿಗಳು 2027ರ ಡಿಸೆಂಬರ್ ಒಳಗೆ ಕೋಲಾರ ಜಿಲ್ಲೆಗೆ ನೀರು ಹರಿಸುವುದಾಗಿ ಮತ್ತೆ ಭರವಸೆ ನೀಡುತ್ತಿರುವುದು ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಎಂದು ಆಂಜನೆಯ ರೆಡ್ಡಿ ಆರೋಪಿಸಿದ್ದಾರೆ.
ಸುಮಾರು 15 ವರ್ಷಗಳಿಂದ ಎತ್ತಿನಹೊಳೆ ನೀರಿಗಾಗಿ ಕಾಯುತ್ತಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರಿಗೆ ಇನ್ನೂ ಒಂದು ಹನಿ ನೀರೂ ತಲುಪಿಲ್ಲ. ಈ ನಡುವೆ ಬೆಂಗಳೂರಿನ ಸುತ್ತಮುತ್ತ ನಿರ್ಮಾಣವಾಗುತ್ತಿರುವ ಕೈಗಾರಿಕಾ ಪ್ರದೇಶಗಳಿಗೆ ಎತ್ತಿನಹೊಳೆ ನೀರು ಪೂರೈಸಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಬೃಹತ್ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಿರುವ ಮಾಹಿತಿ ಬೆಳಕಿಗೆ ಬಂದಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಹೇಳಿದ್ದಾರೆ.
ಸರ್ಕಾರ ಕೂಡಲೇ ಈ ಟೆಂಡರ್ ಪ್ರಕ್ರಿಯೆಯನ್ನು ಹಿಂಪಡೆಯಬೇಕು. ಅಲ್ಲದೆ, 2027ರ ಡಿಸೆಂಬರ್ ಒಳಗೆ ಪ್ರತಿಯೊಂದು ಗ್ರಾಮಕ್ಕೂ ಎತ್ತಿನಹೊಳೆ ನೀರು ಹರಿಸುವ ಕುರಿತು ನೀಡಿರುವ ಭರವಸೆಯನ್ನು ಈಡೇರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮೂರೂ ಜಿಲ್ಲೆಗಳ ರಾಜಕೀಯ ಪಕ್ಷಗಳು ತಮ್ಮ ಹಿತಾಸಕ್ತಿಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಾದ ಅಗತ್ಯವಿದೆ ಎಂದು ಕರೆ ನೀಡಿರುವ ಅವರು, ಈ ವಿಚಾರವಾಗಿ ಜಲಾಗ್ರಹ ಜಂಟಿ ಕ್ರಿಯಾ ಸಮಿತಿ ಸಭೆ ಕರೆದು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಒಗ್ಗೂಡಿಸಿ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.