ಬೆಂಗಳೂರಿನಲ್ಲಿ ಟೋಯಿಂಗ್ ಕಾರ್ಯಾಚರಣೆಗೆ ಸಿದ್ದತೆ
ಬೆಂಗಳೂರು, 20 ಜೂನ್ (ಹಿ.ಸ.) : ಆ್ಯಂಕರ್ : ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಜಯನಗರ ವಲಯ ವ್ಯಾಪ್ತಿಯಲ್ಲಿ ಅನಧಿಕೃತ ವಾಹನ ಪಾರ್ಕಿಂಗ್ಗೆ ಕಡಿವಾಣ ಹಾಕುವ ಉದ್ದೇಶದಿಂದ ಮುಂದಿನ ವಾರದಿಂದ ಮೂರು ನೂತನ ಟೋಯಿಂಗ್ ವಾಹನಗಳು ಕಾರ್ಯಾಚರಣೆಗೆ ಇಳಿಯಲಿವೆ. ಈ ಮೂಲಕ ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಪಾದಚಾರಿಗಳ
Inspection


ಬೆಂಗಳೂರು, 20 ಜೂನ್ (ಹಿ.ಸ.) :

ಆ್ಯಂಕರ್ : ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಜಯನಗರ ವಲಯ ವ್ಯಾಪ್ತಿಯಲ್ಲಿ ಅನಧಿಕೃತ ವಾಹನ ಪಾರ್ಕಿಂಗ್ಗೆ ಕಡಿವಾಣ ಹಾಕುವ ಉದ್ದೇಶದಿಂದ ಮುಂದಿನ ವಾರದಿಂದ ಮೂರು ನೂತನ ಟೋಯಿಂಗ್ ವಾಹನಗಳು ಕಾರ್ಯಾಚರಣೆಗೆ ಇಳಿಯಲಿವೆ. ಈ ಮೂಲಕ ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಪಾದಚಾರಿಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಇಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಹಾಗೂ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಕೆ.ಎನ್. ರಮೇಶ್ ನೂತನ ಟೋಯಿಂಗ್ ವಾಹನಗಳನ್ನು ಪರಿಶೀಲಿಸಿದರು. ಅಧಿಕಾರಿಗಳು ವಾಹನಗಳ ತಾಂತ್ರಿಕ ಸೌಲಭ್ಯಗಳು ಮತ್ತು ಕಾರ್ಯಾಚರಣಾ ಸಿದ್ಧತೆಯನ್ನು ಅವಲೋಕಿಸಿದರು.

ಅನಧಿಕೃತವಾಗಿ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಉಂಟಾಗುತ್ತಿರುವ ಸಂಚಾರ ಸಮಸ್ಯೆಗಳನ್ನು ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಅಸಮರ್ಪಕ ಪಾರ್ಕಿಂಗ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರಿಗೆ ಇಲಾಖೆಯಿಂದ ಅಗತ್ಯ ಫಿಟ್ನೆಸ್ ಪ್ರಮಾಣಪತ್ರ ಪಡೆದಿರುವ ಈ ಟೋಯಿಂಗ್ ವಾಹನಗಳನ್ನು ಶೀಘ್ರದಲ್ಲೇ ಸಂಚಾರ ಪೊಲೀಸರಿಗೆ ಹಸ್ತಾಂತರಿಸಲಾಗುವುದು. ಬಳಿಕ ಮುಂದಿನ ವಾರದಿಂದ ಜಯನಗರ ವಲಯದ ಪ್ರಮುಖ ರಸ್ತೆಗಳಲ್ಲಿ ಟೋಯಿಂಗ್ ಕಾರ್ಯಾಚರಣೆ ಆರಂಭವಾಗಲಿದೆ.

ಈ ಕ್ರಮದಿಂದ ಸಂಚಾರ ಸುಗಮಗೊಳ್ಳುವುದರ ಜೊತೆಗೆ ಪಾದಚಾರಿಗಳ ಸುರಕ್ಷತೆ ಹೆಚ್ಚಳವಾಗುವ ನಿರೀಕ್ಷೆಯಿದೆ. ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಿ, ನಿಗದಿತ ಸ್ಥಳಗಳಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡುವಂತೆ ನಗರ ಪಾಲಿಕೆ ಮನವಿ ಮಾಡಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande