ವಿಜಯಪುರ–ತಿರುಪತಿ ನೇರ ರೈಲು ಸೇವೆಗೆ ಮತ್ತೊಂದು ಮಹತ್ವದ ಹೆಜ್ಜೆ : ಸಂಸದ ನಾರಾಯಣಸಾ ಭಾಂಡಗೆ
ಬಾಗಲಕೋಟೆ, 20 ಜೂನ್ (ಹಿ.ಸ.) : ಆಂಕರ್ : ಉತ್ತರ ಕರ್ನಾಟಕದ ಭಕ್ತರು, ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರ ಬಹುಕಾಲದ ಬೇಡಿಕೆಯಾಗಿರುವ ವಿಜಯಪುರ–ತಿರುಪತಿ ನೇರ ರೈಲು ಸೇವೆ ಆರಂಭಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ ಎಂದು ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ ತಿಳಿಸಿದ್ದಾರೆ
Tarin


ಬಾಗಲಕೋಟೆ, 20 ಜೂನ್ (ಹಿ.ಸ.) :

ಆಂಕರ್ : ಉತ್ತರ ಕರ್ನಾಟಕದ ಭಕ್ತರು, ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರ ಬಹುಕಾಲದ ಬೇಡಿಕೆಯಾಗಿರುವ ವಿಜಯಪುರ–ತಿರುಪತಿ ನೇರ ರೈಲು ಸೇವೆ ಆರಂಭಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ ಎಂದು ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ ತಿಳಿಸಿದ್ದಾರೆ.

ವಿಜಯಪುರದಿಂದ ತಿರುಪತಿಗೆ ನೇರ ರೈಲು ಸಂಪರ್ಕ ಕಲ್ಪಿಸುವಂತೆ ತಾವು ರೈಲ್ವೆ ಇಲಾಖೆಗೆ ಸಲ್ಲಿಸಿದ್ದ ಮನವಿಗೆ ಸಕಾರಾತ್ಮಕ ಸ್ಪಂದನೆ ದೊರೆತಿದೆ. ದಕ್ಷಿಣ ಮಧ್ಯ ರೈಲ್ವೆ (South Central Railway), ಸಿಕಂದರಾಬಾದ್ ಕಚೇರಿಯು ಈ ಮನವಿಯನ್ನು ಮುಂದಿನ ಪರಿಶೀಲನೆ ಹಾಗೂ ಅಗತ್ಯ ಕ್ರಮಕ್ಕಾಗಿ ದಕ್ಷಿಣ ಕರಾವಳಿ ರೈಲ್ವೆ (South Coast Railway), ವಿಶಾಖಪಟ್ಟಣಂ ವಿಭಾಗಕ್ಕೆ ರವಾನಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಬೆಳವಣಿಗೆಯನ್ನು ತಮ್ಮ ನಿರಂತರ ಪ್ರಯತ್ನಕ್ಕೆ ದೊರೆತ ಮತ್ತೊಂದು ಮಹತ್ವದ ಜಯ ಎಂದು ಬಣ್ಣಿಸಿರುವ ನಾರಾಯಣಸಾ ಭಾಂಡಗೆ, ವಿಜಯಪುರ–ತಿರುಪತಿ ನೇರ ರೈಲು ಸೇವೆ ಆರಂಭಿಸುವವರೆಗೆ ತಮ್ಮ ಹೋರಾಟ ಮತ್ತು ಪ್ರಯತ್ನ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಉತ್ತರ ಕರ್ನಾಟಕದ ಅನೇಕ ಜನರು ಪ್ರತಿದಿನ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಪ್ರಯಾಣಿಸುತ್ತಿದ್ದು, ನೇರ ರೈಲು ಸಂಪರ್ಕದ ಕೊರತೆಯಿಂದಾಗಿ ಹಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ನೇರ ರೈಲು ಸೇವೆ ಆರಂಭವಾದರೆ ಭಕ್ತರಿಗೆ ಮಾತ್ರವಲ್ಲದೆ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ವ್ಯಾಪಾರ ವಲಯದವರಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.

“ಜನರ ಆಶಯಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯ. ವಿಜಯಪುರ–ತಿರುಪತಿ ನೇರ ರೈಲು ಸೇವೆ ಮಂಜೂರಾಗಿ ಅನುಷ್ಠಾನಗೊಳ್ಳುವವರೆಗೆ ನಿರಂತರವಾಗಿ ಪ್ರಯತ್ನಿಸುತ್ತೇನೆ. ಶೀಘ್ರದಲ್ಲೇ ಈ ಸೇವೆ ಸಾಕಾರಗೊಳ್ಳಲಿದೆ ಎಂಬ ವಿಶ್ವಾಸವಿದೆ” ಎಂದು ನಾರಾಯಣಸಾ ಭಾಂಡಗೆ ಹೇಳಿದ್ದಾರೆ.

ರೈಲ್ವೆ ಇಲಾಖೆಯ ಮುಂದಿನ ಪರಿಶೀಲನೆ ಬಳಿಕ ಈ ಯೋಜನೆಗೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದ್ದು, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಜನರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande