
ವಿಜಯಪುರ, 20 ಜೂನ್ (ಹಿ.ಸ.) :
ಆಂಕರ್ : ವಿಜಯಪುರ, ಗದಗ ಬೈಪಾಸ್ ಹಾಗೂ ಹುಬ್ಬಳ್ಳಿ ದಕ್ಷಿಣ ಭಾಗದ ಜನರ ಬಹು ವರ್ಷಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ದೊರೆತಿದ್ದು, ಮೈಸೂರು–ಪಂಢರಪುರ ನಡುವೆ ಸಂಚರಿಸುವ ಪ್ರಸಿದ್ಧ ಗೋಲ್ ಗುಂಬಜ್ ರೈಲು ಮಾರ್ಗದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.
ರೈಲು ಸಂಖ್ಯೆ 16535 ಮೈಸೂರು–ಪಂಢರಪುರ ಹಾಗೂ 16536 ಪಂಢರಪುರ–ಮೈಸೂರು ರೈಲುಗಳು ಇನ್ನು ಮುಂದೆ ಗದಗ ಬೈಪಾಸ್ ಹಾಗೂ ಹುಬ್ಬಳ್ಳಿ ದಕ್ಷಿಣ ಭಾಗದ ಮೂಲಕ ಸಂಚರಿಸಲಿವೆ. ಈ ಹಿಂದೆ ರೈಲುಗಳು ಗದಗ ಮತ್ತು ಹುಬ್ಬಳ್ಳಿ ನಿಲ್ದಾಣಗಳ ಮೂಲಕ ಸಂಚರಿಸುತ್ತಿದ್ದವು.
ಹೊಸ ಮಾರ್ಗ ಬದಲಾವಣೆಯಿಂದ ಈo ಭಾಗದ ಸಾವಿರಾರು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ವಿಜಯಪುರ ಲೋಕ ಸಭಾ ಕ್ಷೇತ್ರದ ಸಂಸದರಾದ ರಮೇಶ್ ಜಿಗಜಿಣಗಿ ಅವರು ಗದಗ ಬೈಪಾಸ್ ಹಾಗೂ ಹುಬ್ಬಳ್ಳಿ ದಕ್ಷಿಣ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಪರಿಗಣಿಸಿ, ಗೋಲ್ ಗುಂಬಜ್ ರೈಲಿನ ಮಾರ್ಗ ಬದಲಾವಣೆ ಮಾಡುವಂತೆ ಮನವಿ ಸಲ್ಲಿಸಿದ್ದರು.
ಈ ಮನವಿಗೆ ಸ್ಪಂದಿಸಿದ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಮಾರ್ಗ ಬದಲಾವಣೆಗೆ ಮನವಿ ಮಾಡಲಾಗಿತ್ತು. ಇದೀಗ ರೈಲ್ವೆ ಇಲಾಖೆ ಈ ಬೇಡಿಕೆಯನ್ನು ಪುರಸ್ಕರಿಸಿ, ಮುಂಗಡ ರೈಲ್ವೆ ಕಾಯ್ದಿರಿಸುವ ಅವಧಿಯ (Advance Reservation Period) ದಿನಾಂಕಗಳ ಬಳಿಕ ನೂತನ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲು ನಿರ್ಧರಿಸಿದೆ.
ಮೈಸೂರು–ಬೆಂಗಳೂರು–ಪಂಢರಪುರ (ಮಹಾರಾಷ್ಟ್ರ) ನಡುವೆ ಸಂಚರಿಸುವ ಗೋಲ್ ಗುಂಬಜ್ ರೈಲು ಹೊಸ ಮಾರ್ಗದ ಮೂಲಕ ಸಂಚರಿಸುವುದರಿಂದ ಧಾರವಾಡ, ಹುಬ್ಬಳ್ಳಿ ದಕ್ಷಿಣ, ಗದಗ ಬೈಪಾಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ದೊರೆಯಲಿದೆ.
ಈ ಮಹತ್ವದ ಬೇಡಿಕೆಯನ್ನು ಈಡೇರಿಸಲು ಸಹಕರಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರಿಗೆ ಧನ್ಯವಾದಗಳನ್ನು ಸಲ್ಲಿಸಲಾಗಿದೆ.
ರೈಲು ಮಾರ್ಗ ಬದಲಾವಣೆಯಿಂದ ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಧಾರ್ಮಿಕ ಪ್ರಯಾಣಗಳಿಗೆ ಅನುಕೂಲವಾಗಲಿದ್ದು, ಉತ್ತರ ಕರ್ನಾಟಕದ ರೈಲು ಸಂಪರ್ಕ ವ್ಯವಸ್ಥೆಗೆ ಮತ್ತಷ್ಟು ಬಲ ಸಿಗಲಿದೆ ಎಂದು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande