ಹಿಜಾಬ್ ಅವಕಾಶ ವಿರೋಧಿಸಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಣೆ
ಬಾಗಲಕೋಟೆ, 02 ಜೂನ್ (ಹಿ.ಸ.) : ಆಂಕರ್ : ರಾಜ್ಯ ಸರ್ಕಾರವು ಶಾಲಾ–ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿರುವುದನ್ನು ವಿರೋಧಿಸಿ ಬಾಗಲಕೋಟೆ ನಗರದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಹಿಂದು ವಿದ್ಯಾರ್ಥಿಗಳಿಗೆ ಕೇಸರಿ ಶಾಲುಗಳನ್ನು ವಿತರಿಸಿದ ಘಟನೆ ಸೋಮವಾರ ನಗರದ ಸರ್ಕಾರಿ ಪದವಿ ಕಾಲೇಜು ಹಾಗೂ ಸರ
ಹಿಜಾಬ್


ಬಾಗಲಕೋಟೆ, 02 ಜೂನ್ (ಹಿ.ಸ.) :

ಆಂಕರ್ : ರಾಜ್ಯ ಸರ್ಕಾರವು ಶಾಲಾ–ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿರುವುದನ್ನು ವಿರೋಧಿಸಿ ಬಾಗಲಕೋಟೆ ನಗರದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಹಿಂದು ವಿದ್ಯಾರ್ಥಿಗಳಿಗೆ ಕೇಸರಿ ಶಾಲುಗಳನ್ನು ವಿತರಿಸಿದ ಘಟನೆ ಸೋಮವಾರ ನಗರದ ಸರ್ಕಾರಿ ಪದವಿ ಕಾಲೇಜು ಹಾಗೂ ಸರ್ಕಾರಿ ಐಟಿಐ ಕಾಲೇಜು ಸಮೀಪ ನಡೆಯಿತು.

ಹಿಜಾಬ್ ಗೆ ಅವಕಾಶ ನೀಡಿರುವ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುವ ಉದ್ದೇಶದಿಂದ ಶ್ರೀರಾಮ ಸೇನೆ ಮುಖಂಡರು ಮತ್ತು ಕಾರ್ಯಕರ್ತರು ಕಾಲೇಜುಗಳ ಹೊರಭಾಗದಲ್ಲಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲುಗಳನ್ನು ವಿತರಿಸಿದರು. ಹಿಂದು ಧರ್ಮದ ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ಗುರುತಿನ ಸಂಕೇತವಾಗಿ ಕೇಸರಿ ಶಾಲು ಧರಿಸಿಕೊಂಡು ಕಾಲೇಜಿಗೆ ಹೋಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಮುಖಂಡರು ತಿಳಿಸಿದರು.

ಕಾಲೇಜುಗಳಿಗೆ ಆಗಮಿಸಿದ್ದ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲುಗಳನ್ನು ಸ್ವೀಕರಿಸಿದ್ದು, ಕೆಲವರು ಅವುಗಳನ್ನು ತಮ್ಮ ಬ್ಯಾಗ್ಗಳಲ್ಲಿ ಇರಿಸಿಕೊಂಡು ತೆರಳಿದರು. ಈ ವೇಳೆ ವಿದ್ಯಾರ್ಥಿಗಳ ನಡುವೆ ಸರ್ಕಾರದ ನಿರ್ಧಾರದ ಕುರಿತು ಚರ್ಚೆಗಳು ನಡೆದವು. “ಒಂದು ಸಮುದಾಯಕ್ಕೆ ಒಂದು ರೀತಿಯ ಅವಕಾಶ ಹಾಗೂ ಇನ್ನೊಂದು ಸಮುದಾಯಕ್ಕೆ ಬೇರೆ ರೀತಿಯ ನಿಯಮ ಅನ್ವಯಿಸುವುದು ಸರಿಯಲ್ಲ. ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ನಿಯಮ ಜಾರಿಯಾಗಬೇಕು” ಎಂಬ ಅಭಿಪ್ರಾಯಗಳನ್ನು ಕೆಲ ವಿದ್ಯಾರ್ಥಿಗಳು ವ್ಯಕ್ತಪಡಿಸಿದರೆಂದು ತಿಳಿದು ಬಂದಿದೆ.

ಘಟನೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತ್ತು. ಶ್ರೀರಾಮ ಸೇನೆ ಕಾರ್ಯಕರ್ತರು ಕಾಲೇಜು ಆವರಣದೊಳಗೆ ಪ್ರವೇಶಿಸದಂತೆ ಕಾಲೇಜುಗಳ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳ ಸಂಚಾರ ಹಾಗೂ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ಅಡಚಣೆ ಉಂಟಾಗದಂತೆ ಅಧಿಕಾರಿಗಳು ನಿಗಾ ವಹಿಸಿದ್ದರು.

ಸರ್ಕಾರದ ಹಿಜಾಬ್ ನೀತಿಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಪರ–ವಿರೋಧ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಬಾಗಲಕೋಟೆಯಲ್ಲಿ ನಡೆದ ಈ ಬೆಳವಣಿಗೆ ಗಮನ ಸೆಳೆಯಿತು. ಕಾಲೇಜುಗಳ ಸುತ್ತಮುತ್ತ ಪರಿಸ್ಥಿತಿ ಶಾಂತಿಯುತವಾಗಿದ್ದು, ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶೈಕ್ಷಣಿಕ ಸಂಸ್ಥೆಗಳಲ್ಲಿ ಸಮಾನತೆ, ಶಿಸ್ತು ಹಾಗೂ ಸೌಹಾರ್ದತೆ ಕಾಪಾಡುವ ಕುರಿತು ಸಾರ್ವಜನಿಕ ವಲಯದಲ್ಲಿಯೂ ಚರ್ಚೆಗಳು ಮುಂದುವರಿದಿವೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆ ಹಾಗೂ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ಶೈಕ್ಷಣಿಕ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande