ಭುವನೇಶ್ವರಿ ವಿಶೇಷ ಶಾಲೆಯಲ್ಲಿ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಣೆ
ಗದಗ, 02 ಜೂನ್ (ಹಿ.ಸ.) : ಆ್ಯಂಕರ್ : ಹುಟ್ಟುಹಬ್ಬವನ್ನು ಕೇವಲ ಸಂಭ್ರಮಾಚರಣೆಗೆ ಸೀಮಿತಗೊಳಿಸದೆ ಸಮಾಜಮುಖಿ ಕಾರ್ಯಗಳ ಮೂಲಕ ಆಚರಿಸುವ ಸಂಸ್ಕೃತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಅದರಂತೆ ವಿಶ್ವ ಕಲ್ಯಾಣ (ರಿ) ಗದಗ ಸಂಸ್ಥೆ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಶ್
ಫೋಟೋ


ಗದಗ, 02 ಜೂನ್ (ಹಿ.ಸ.) :

ಆ್ಯಂಕರ್ : ಹುಟ್ಟುಹಬ್ಬವನ್ನು ಕೇವಲ ಸಂಭ್ರಮಾಚರಣೆಗೆ ಸೀಮಿತಗೊಳಿಸದೆ ಸಮಾಜಮುಖಿ ಕಾರ್ಯಗಳ ಮೂಲಕ ಆಚರಿಸುವ ಸಂಸ್ಕೃತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಅದರಂತೆ ವಿಶ್ವ ಕಲ್ಯಾಣ (ರಿ) ಗದಗ ಸಂಸ್ಥೆ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಶ್ರೀಮತಿ ಸವಿತಾ ಮಲ್ಲನಗೌಡ ಹನಮಂತಗೌಡ ಅವರು ತಮ್ಮ ಹುಟ್ಟುಹಬ್ಬವನ್ನು ವಿಶೇಷ ಮಕ್ಕಳೊಂದಿಗೆ ಆಚರಿಸುವ ಮೂಲಕ ಮಾನವೀಯತೆಯ ಮೆರುಗು ತೋರಿದರು.

ಶಾಲಾ ಆವರಣದಲ್ಲಿ ನಡೆದ ಸರಳ ಹಾಗೂ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಶ್ರೀಮತಿ ಸವಿತಾ ಮಲ್ಲನಗೌಡ ಹನಮಂತಗೌಡ ಅವರು ವಿಶೇಷ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿದರು. ಬಳಿಕ ಶಾಲೆಯ ಎಲ್ಲ ಮಕ್ಕಳಿಗೆ ಸಿಹಿ ಹಂಚಿ, ವಿಶೇಷವಾಗಿ ಊಟದ ವ್ಯವಸ್ಥೆ ಮಾಡಿ ಸ್ವತಃ ತಾವೇ ಮಕ್ಕಳಿಗೆ ಊಟ ಬಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ವಿಶೇಷ ಮಕ್ಕಳೊಂದಿಗೆ ಸಮಯ ಕಳೆಯುತ್ತಾ ಅವರೊಂದಿಗೆ ಆತ್ಮೀಯವಾಗಿ ಬೆರೆತ ದೃಶ್ಯ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮಲ್ಲನಗೌಡ ಹಾಗೂ ಸಿದ್ಧು ವಡಕಣ್ಣವರ ಅವರು, ವಿಶೇಷ ಮಕ್ಕಳಲ್ಲಿರುವ ಅಪಾರ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಿ ಬೆಳೆಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ದೇವರನ್ನು ಹುಡುಕುತ್ತಾ ದೇವಸ್ಥಾನಗಳಿಗೆ ತೆರಳುವ ಬದಲು ಇಂತಹ ಮಕ್ಕಳ ಸೇವೆಯಲ್ಲಿ ತೊಡಗಿಕೊಂಡಾಗ ನಿಜವಾದ ದೈವತ್ವದ ಅನುಭವವಾಗುತ್ತದೆ ಎಂದು ಭಾವುಕರಾಗಿ ನುಡಿದರು.

ದೇವರು ಎಲ್ಲೋ ದೂರದಲ್ಲಿಲ್ಲ, ಇಂತಹ ವಿಶೇಷ ಮಕ್ಕಳಲ್ಲಿಯೇ ಇದ್ದಾನೆ. ಇವರ ಮುಖದಲ್ಲಿನ ನಗು ಮತ್ತು ಸಂತೋಷವೇ ನಮ್ಮ ಜೀವನಕ್ಕೆ ಸಾರ್ಥಕತೆಯನ್ನು ನೀಡುತ್ತದೆ. ವಿಶೇಷ ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಗಳನ್ನು ಹೊರತಂದು ಸಮಾಜದ ಮುಖ್ಯವಾಹಿನಿಗೆ ತರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.

ಇದೇ ವೇಳೆ ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಕಲ್ಯಾಣಕ್ಕಾಗಿ ದೇಣಿಗೆಯನ್ನೂ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಶಾಲೆಯ ವಿಶೇಷ ಮಕ್ಕಳೊಂದಿಗೆ ಶ್ರೀಮತಿ ಸವಿತಾ ಮಲ್ಲನಗೌಡ ಹನಮಂತಗೌಡ ಅವರು ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಂಡರು. ಮಕ್ಕಳು ಸಂತೋಷದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಶಾಲಾ ಆವರಣ ಸಂಭ್ರಮದ ವಾತಾವರಣದಿಂದ ಕಂಗೊಳಿಸಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವ ಕಲ್ಯಾಣ ಸಂಸ್ಥೆಯ ಅಧ್ಯಕ್ಷರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ ಹದ್ದಣ್ಣವರ ವಹಿಸಿದ್ದರು. ಅವರು ಮಾತನಾಡಿ, ಸಮಾಜದ ವಿವಿಧ ವರ್ಗಗಳ ಜನರು ವಿಶೇಷ ಮಕ್ಕಳೊಂದಿಗೆ ತಮ್ಮ ಸಂತಸದ ಕ್ಷಣಗಳನ್ನು ಹಂಚಿಕೊಳ್ಳುತ್ತಿರುವುದು ಸಂತೋಷದ ಸಂಗತಿಯಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ ಸಮಾಜದಲ್ಲಿ ವಿಶೇಷ ಮಕ್ಕಳ ಕುರಿತು ಜಾಗೃತಿ ಮೂಡಿಸುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಂತಮ್ಮ ಹೂಗಾರ, ಶಾಲೆಯ ಸಿಬ್ಬಂದಿ, ವಿಶೇಷ ಅಗತ್ಯವುಳ್ಳ ಮಕ್ಕಳು, ಪಾಲಕರು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು. ಕೊನೆಯಲ್ಲಿ ಎಲ್ಲರಿಗೂ ಸಿಹಿಯೊಂದಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಗಣ್ಯರು ವಿಶೇಷ ಮಕ್ಕಳಿಗೆ ತಮ್ಮ ಕೈಯಾರೆ ಊಟ ಮತ್ತು ಸಿಹಿ ತಿನ್ನಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸಿದರು.

ವಿಶೇಷ ಮಕ್ಕಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಶ್ರೀಮತಿ ಸವಿತಾ ಮಲ್ಲನಗೌಡ ಹನಮಂತಗೌಡ ಅವರ ಈ ಸಮಾಜಮುಖಿ ಕಾರ್ಯಕ್ಕೆ ಪಾಲಕರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಸೇವಾ ಮನೋಭಾವವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande