ಮಹಾಲಿಂಗಪುರದ ಪುಟ್ಟ ಪ್ರತಿಭೆ ರವೀಂದ್ರ ಢಪಳಾಪುರನಿಗೆ ರಾಷ್ಟ್ರೀಯ ಗೌರವ
ಬಾಗಲಕೋಟೆ, 19 ಜೂನ್ (ಹಿ.ಸ.) : ಆಂಕರ್ : ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ಕೇವಲ 2 ವರ್ಷ 6 ತಿಂಗಳ ಪ್ರಾಯದ ಬಾಲಕ ರವೀಂದ್ರ ಢಪಳಾಪುರ ತನ್ನ ಅಸಾಧಾರಣ ಜ್ಞಾಪಕ ಶಕ್ತಿ ಹಾಗೂ ಅದ್ಭುತ ಪ್ರತಿಭೆಯ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾನೆ. ಪುಟ್ಟ ವಯಸ್ಸಿನ
ಸಾಧನೆ


ಬಾಗಲಕೋಟೆ, 19 ಜೂನ್ (ಹಿ.ಸ.) :

ಆಂಕರ್ : ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ಕೇವಲ 2 ವರ್ಷ 6 ತಿಂಗಳ ಪ್ರಾಯದ ಬಾಲಕ ರವೀಂದ್ರ ಢಪಳಾಪುರ ತನ್ನ ಅಸಾಧಾರಣ ಜ್ಞಾಪಕ ಶಕ್ತಿ ಹಾಗೂ ಅದ್ಭುತ ಪ್ರತಿಭೆಯ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾನೆ. ಪುಟ್ಟ ವಯಸ್ಸಿನಲ್ಲಿಯೇ ತೋರಿದ ಅಪರೂಪದ ನೆನಪಿನ ಸಾಮರ್ಥ್ಯವನ್ನು ಪರಿಗಣಿಸಿದ ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ (India Book of Records) ಸಂಸ್ಥೆಯು ಬಾಲಕನ ಸಾಧನೆಯನ್ನು ದಾಖಲಿಸಿ, ಆತನಿಗೆ ‘IBR Achiever’ ಎಂಬ ಗೌರವ ಬಿರುದನ್ನು ನೀಡಿ ಸನ್ಮಾನಿಸಿದೆ.

ಬಾಲಕ ರವೀಂದ್ರ ನೀಡಲಾದ ವಿವಿಧ ಚಿತ್ರಗಳು ಹಾಗೂ ವಿಷಯಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿ ಗುರುತಿಸಿ, ಅವುಗಳ ಸರಿಯಾದ ಹೆಸರುಗಳನ್ನು ನಿಖರವಾಗಿ ಹೇಳುವ ಮೂಲಕ ಈ ವಿಶಿಷ್ಟ ಸಾಧನೆ ಮಾಡಿದ್ದಾನೆ. ಆತನ ಚುರುಕಾದ ಗ್ರಹಿಕೆ, ನೆನಪಿನ ಶಕ್ತಿ ಹಾಗೂ ಕಲಿಕೆಯ ಆಸಕ್ತಿಯನ್ನು ಗುರುತಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯು 2026ರ ಜನವರಿ 28ರಂದು ಈ ಸಾಧನೆಯನ್ನು ಅಧಿಕೃತವಾಗಿ ದೃಢೀಕರಿಸಿದೆ.

ನಂತರ ದಾಖಲೆ ಪ್ರಮಾಣಪತ್ರ ಹಾಗೂ ಪದಕವನ್ನು ಜೂನ್ 6ರಂದು ಅಧಿಕೃತವಾಗಿ ವಿತರಿಸಲಾಗಿದ್ದು, ಬಾಲಕನ ಕುಟುಂಬ ಹಾಗೂ ಮಹಾಲಿಂಗಪುರ ಪಟ್ಟಣದ ಜನತೆ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರೀಯ ದಾಖಲೆಯ ಗೌರವ ಪಡೆದಿರುವ ರವೀಂದ್ರ ಢಪಳಾಪುರ, ಭವಿಷ್ಯದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡುವ ಭರವಸೆ ಮೂಡಿಸಿದ್ದಾನೆ.

ಬಾಲಕನ ಪ್ರತಿಭೆಗೆ ಪೋಷಕರು, ಬಂಧುಗಳು, ಶಿಕ್ಷಕರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿ, ಆತನಿಗೆ ಶುಭ ಹಾರೈಸಿದ್ದಾರೆ. ಮಹಾಲಿಂಗಪುರದ ಹೆಸರನ್ನು ರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ ಈ ಪುಟ್ಟ ಪ್ರತಿಭೆ ಇದೀಗ ಎಲ್ಲರ ಗಮನ ಸೆಳೆದಿದ್ದಾನೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande