
ಬಾಗಲಕೋಟೆ, 19 ಜೂನ್ (ಹಿ.ಸ.) :
ಆಂಕರ್ : ಅಕ್ರಮ ಮರಳು ಸಾಗಣೆಗೆ ಕಡಿವಾಣ ಹಾಕಲು ಮುಂದಾದ ಅಧಿಕಾರಿಗಳ ಮೇಲೆಯೇ ದಬ್ಬಾಳಿಕೆ ನಡೆಸಿದ ಆರೋಪ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ಕೀಳಿ ಬಂದಿದೆ. ಅಕ್ರಮ ಚಟುವಟಿಕೆಗಳಿಗೆ ತಡೆ ಹಾಕಲು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳ ಮನೆಗೆ ನುಗ್ಗಿ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಮರಳು ಸಾಗಣೆ ನಿಯಮ ಉಲ್ಲಂಘನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದ ಅಧಿಕಾರಿಗಳಿಗೆ ಕೆಲವರು ಒತ್ತಡ ಹೇರಲು ಯತ್ನಿಸಿದ್ದು, ಇದಕ್ಕೆ ಮಣಿಯದ ಹಿನ್ನೆಲೆಯಲ್ಲಿ ಮನೆಗೆ ತೆರಳಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವ ಇಂತಹ ಘಟನೆಗಳು ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.
ಸರ್ಕಾರದ ಆದಾಯಕ್ಕೆ ನಷ್ಟ ಉಂಟುಮಾಡುವ ಅಕ್ರಮ ಮರಳು ಸಾಗಣೆಯನ್ನು ತಡೆಯುವ ಜವಾಬ್ದಾರಿ ಹೊಂದಿರುವ ಅಧಿಕಾರಿಗಳಿಗೆ ರಕ್ಷಣೆ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ. ಪ್ರಾಮಾಣಿಕ ಅಧಿಕಾರಿಗಳು ಯಾವುದೇ ಭಯವಿಲ್ಲದೆ ಕರ್ತವ್ಯ ನಿರ್ವಹಿಸಲು ಸೂಕ್ತ ಭದ್ರತೆ ಮತ್ತು ಕಾನೂನು ಕ್ರಮ ಅಗತ್ಯ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ. ಅಕ್ರಮ ಮರಳು ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿ ಬರುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande