
ಬಾಗಲಕೋಟೆ, 19 ಜೂನ್ (ಹಿ.ಸ.) :
ಆಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಬಳ್ಳೂರ ಪುನರ್ವಸತಿ ಕೇಂದ್ರದ ಬಳಿ ನಿರ್ಮಿಸಲಾಗಿರುವ ಸದ್ಗುರು ಸಿದ್ಧಾರೂಢರ ನೂತನ ಶಿಲಾಮಂದಿರದ ಲೋಕಾರ್ಪಣೆ ಸಮಾರಂಭವು ಜೂನ್ 22ರಂದು ಭಕ್ತಿಭಾವದ ವಾತಾವರಣದಲ್ಲಿ ನಡೆಯಲಿದೆ ಎಂದು ಸಿದ್ದರಾಮ ಶಿವಯೋಗಿಗಳು ತಿಳಿಸಿದ್ದಾರೆ.
ನಗರದ ಕಾನಿಪ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭದ ಅಂಗವಾಗಿ ಸದ್ಗುರು ಸಿದ್ಧಾರೂಢರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಶಿವಯೋಗಾಶ್ರಮದ ಅಡಿಗಲ್ಲು ಸಮಾರಂಭವೂ ಅದೇ ದಿನ ನೆರವೇರಲಿದೆ ಎಂದು ಮಾಹಿತಿ ನೀಡಿದರು.
ಈ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮಕ್ಕೆ ನಾಡಿನ ವಿವಿಧ ಭಾಗಗಳಿಂದ ಪೂಜ್ಯರು, ಗಣ್ಯರು ಹಾಗೂ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ. ಸಿದ್ಧಾರೂಢರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆಯಬೇಕು ಎಂದು ಅವರು ಮನವಿ ಮಾಡಿದರು.
ಮುಧೋಳ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಬಹುದಿನಗಳ ಆಶಯದಂತೆ ಶಿಲಾಮಂದಿರ ನಿರ್ಮಾಣಗೊಂಡಿದ್ದು, ಈ ಸಮಾರಂಭವು ಭಕ್ತರಿಗೆ ವಿಶೇಷ ಆಧ್ಯಾತ್ಮಿಕ ಅನುಭವ ನೀಡಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪೂಜಾ ವಿಧಿವಿಧಾನಗಳು ಹಾಗೂ ಆಶೀರ್ವಚನ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಶಿ ಟ್ರಸ್ಟ್ನ ಚಂದ್ರಶೇಖರ ದೇಸಾಯಿ ಉಪಸ್ಥಿತರಿದ್ದರು. ಸಮಾರಂಭದ ಯಶಸ್ಸಿಗಾಗಿ ಸಿದ್ಧಾರೂಢ ಭಕ್ತ ಮಂಡಳಿ ಹಾಗೂ ಶಿವಯೋಗಾಶ್ರಮದ ಪದಾಧಿಕಾರಿಗಳು ಸಿದ್ಧತೆಗಳನ್ನು ಕೈಗೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande