ಮುದ್ದೇಬಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಯುಜಿಸಿ 2(ಎಫ್) ಮಾನ್ಯತೆ : ರಾಜ್ಯದ ವಸತಿಯುಕ್ತ ಸರ್ಕಾರಿ ಕಾಲೇಜುಗಳಲ್ಲಿ ಮೊದಲ ಸಾಧನೆ
ವಿಜಯಪುರ, 18 ಜೂನ್ (ಹಿ.ಸ.) : ಆಂಕರ್ : ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಹಡಲಗೇರಿಯ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಹತ್ವದ ಶೈಕ್ಷಣಿಕ ಸಾಧನೆ ಮಾಡಿದ್ದು, ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC)ದಿಂದ ಪ್ರತಿಷ್ಠಿತ 2(ಎಫ್) ಮಾನ್ಯತೆ ಪಡೆದುಕೊಂಡಿದೆ.
ಶಾಲೆ


ವಿಜಯಪುರ, 18 ಜೂನ್ (ಹಿ.ಸ.) :

ಆಂಕರ್ : ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಹಡಲಗೇರಿಯ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಹತ್ವದ ಶೈಕ್ಷಣಿಕ ಸಾಧನೆ ಮಾಡಿದ್ದು, ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC)ದಿಂದ ಪ್ರತಿಷ್ಠಿತ 2(ಎಫ್) ಮಾನ್ಯತೆ ಪಡೆದುಕೊಂಡಿದೆ.

ರಾಜ್ಯದ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ ಯುಜಿಸಿಯ 2(ಎಫ್) ಮಾನ್ಯತೆ ಪಡೆದ ಮೊದಲ ಕಾಲೇಜು ಎಂಬ ಹೆಗ್ಗಳಿಕೆಗೆ ಮುದ್ದೇಬಿಹಾಳದ ಈ ಕಾಲೇಜು ಪಾತ್ರವಾಗಿದೆ. ಕಾಲೇಜು ಆರಂಭವಾದ ಅಲ್ಪಾವಧಿಯಲ್ಲಿಯೇ ಯುಜಿಸಿಯ ನಿಗದಿತ ಗುಣಮಟ್ಟದ ಮಾನದಂಡಗಳನ್ನು ಯಶಸ್ವಿಯಾಗಿ ಪೂರೈಸಿ ಈ ಗೌರವವನ್ನು ಪಡೆದುಕೊಂಡಿರುವುದು ವಿಶೇಷವಾಗಿದೆ.

ಈ ಕುರಿತು ಮಾಹಿತಿ ನೀಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಎಲ್. ಪಾಟೀಲ ಅವರು, ಕಾಲೇಜಿನ ಶೈಕ್ಷಣಿಕ ಗುಣಮಟ್ಟ, ಮೂಲಸೌಕರ್ಯ, ಆಡಳಿತ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳನ್ನು ಪರಿಗಣಿಸಿ ಯುಜಿಸಿ ಈ ಮಾನ್ಯತೆಯನ್ನು ನೀಡಿದೆ ಎಂದು ತಿಳಿಸಿದರು.

ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ 2(ಎಫ್) ಮಾನ್ಯತೆ ಪಡೆಯುತ್ತಿರುವುದು ಕಾಲೇಜಿಗೆ ಹೆಮ್ಮೆಯ ಸಂಗತಿಯಾಗಿದೆ. ಇದು ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಒಗ್ಗಟ್ಟಿನ ಪ್ರಯತ್ನದ ಫಲವಾಗಿದೆ ಎಂದು ಅವರು ಹೇಳಿದರು.

ಈ ಮಹತ್ವದ ಸಾಧನೆಯ ಹಿಂದೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ (IQAC) ಸಂಯೋಜಕರಾದ ಡಾ. ಅನಿಲಕುಮಾರ ಡಿಗ್ಗಿ ಅವರ ಮಾರ್ಗದರ್ಶನ ಹಾಗೂ ಕಾಲೇಜಿನ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಪರಿಶ್ರಮ ಪ್ರಮುಖವಾಗಿದೆ ಎಂದು ತಿಳಿಸಲಾಗಿದೆ.

ಯುಜಿಸಿ 2(ಎಫ್) ಮಾನ್ಯತೆ ದೊರೆತಿರುವುದರಿಂದ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ದೊರೆಯಲಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ, ಸಂಶೋಧನೆ ಹಾಗೂ ಅಭಿವೃದ್ಧಿ ಅವಕಾಶಗಳು ಹೆಚ್ಚಾಗಲಿವೆ ಎಂದು ಕಾಲೇಜು ಆಡಳಿತ ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ.

ಕಾಲೇಜಿನ ಈ ಐತಿಹಾಸಿಕ ಸಾಧನೆಗೆ ಕ್ಷೇತ್ರದ ಶಾಸಕ ಅಪ್ಪಾಜಿ ಎಸ್. ನಾಡಗೌಡ ಅವರು ಅಭಿನಂದನೆ ಸಲ್ಲಿಸಿದ್ದು, ಕಾಲೇಜು ಮುಂದಿನ ದಿನಗಳಲ್ಲಿ ಇನ್ನಷ್ಟು ಶೈಕ್ಷಣಿಕ ಪ್ರಗತಿ ಸಾಧಿಸಲಿ ಎಂದು ಶುಭ ಹಾರೈಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande