
ಬಾಗಲಕೋಟೆ, 18 ಜೂನ್ (ಹಿ.ಸ.) :
ಆಂಕರ್ : ಬಾಗಲಕೋಟೆ ನಗರದಲ್ಲಿ ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡುತ್ತಿರುವ ರಸ್ತೆ ಗುಂಡಿಗಳ ಸಮಸ್ಯೆ ಮತ್ತೆ ಮುನ್ನೆಲೆಗೆ ಬಂದಿದೆ. ಬಾಗಲಕೋಟೆಯ ನವನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಂಭಾಗದ ರಸ್ತೆಯಲ್ಲಿ ಬಿದ್ದಿರುವ ಬೃಹದಾಕಾರದ ಗುಂಡಿ ವಾಹನ ಸವಾರರಿಗೆ ಆತಂಕದ ಕಾರಣವಾಗಿದೆ.
ರಸ್ತೆಯ ಮಧ್ಯಭಾಗದಲ್ಲೇ ಉಂಟಾಗಿರುವ ಈ ಆಳವಾದ ಗುಂಡಿಯಿಂದಾಗಿ ಪ್ರತಿನಿತ್ಯ ವಾಹನ ಸವಾರರು ಅಪಾಯ ಎದುರಿಸುವಂತಾಗಿದೆ. ರಾತ್ರಿ ವೇಳೆ ಈ ಗುಂಡಿ ಕಾಣಿಸದೇ ದ್ವಿಚಕ್ರ ವಾಹನ ಸವಾರರು ಹಾಗೂ ಇತರೆ ವಾಹನಗಳು ಅಪಘಾತಕ್ಕೀಡಾಗುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಈ ಭಾಗದಲ್ಲಿ ಹಲವು ಅಪಘಾತಗಳು ಸಂಭವಿಸಿದ್ದು, ಸಾರ್ವಜನಿಕರು ರಸ್ತೆ ನಿರ್ವಹಣೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಪ್ರಮುಖ ಭಾಗದಲ್ಲಿರುವ ರಸ್ತೆಯಲ್ಲೇ ಇಂತಹ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗುಂಡಿಯನ್ನು ತಕ್ಷಣ ಮುಚ್ಚಿ, ಸಾರ್ವಜನಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಜನರ ಜೀವಕ್ಕೆ ಬೆಲೆ ನೀಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಹಾಗೂ ನಗರಾಭಿವೃದ್ಧಿ ಅಧಿಕಾರಿಗಳು ಕೂಡಲೇ ಗಮನಹರಿಸಬೇಕು. ಮತ್ತೊಂದು ಅನಾಹುತ ಸಂಭವಿಸುವ ಮುನ್ನವೇ ರಸ್ತೆ ಗುಂಡಿ ಮುಚ್ಚುವ ಕಾರ್ಯ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಈ ಸಮಸ್ಯೆಯ ವಿಡಿಯೋ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಲುಪುವವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೊಳ್ಳುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande