
ಬಾಗಲಕೋಟೆ, 18 ಜೂನ್ (ಹಿ.ಸ.) :
ಆಂಕರ್ : ಆಟೋ ಚಾಲಕನಿಗೆ ಬಾಡಿಗೆ ಹಣ ನೀಡುವ ಸಮಯದಲ್ಲಿ ಮಹಿಳೆಯೊಬ್ಬರ ಚಿನ್ನಾಭರಣವಿದ್ದ ಬ್ಯಾಗ್ ಕಳುವಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಬಸವೇಶ್ವರ ವೃತ್ತದ ಸಮೀಪದ ಬಸ್ ನಿಲ್ದಾಣದ ಬಳಿ ನಡೆದಿದೆ.
ಕೇವಲ ಕೆಲವೇ ಕ್ಷಣಗಳಲ್ಲಿ ನಡೆದ ಈ ಕಳ್ಳತನದಿಂದ ಮಹಿಳೆ ಆತಂಕಕ್ಕೊಳಗಾಗಿದ್ದು, ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಜಯಪುರ ತಾಲೂಕಿನ ಸಾಯಿನಗರದಲ್ಲಿ ವಾಸವಾಗಿರುವ ಮಹಿಳೆಯೊಬ್ಬರು ತಮ್ಮ ಸೊಸೆಯೊಂದಿಗೆ ಸ್ವಗ್ರಾಮಕ್ಕೆ ತೆರಳಲು ಮುಧೋಳ ನಗರದಿಂದ ಆಟೋ ಮೂಲಕ ಬಸ್ ನಿಲ್ದಾಣಕ್ಕೆ ಬಂದಿದ್ದರು. ಆಟೋದಿಂದ ಇಳಿದ ಬಳಿಕ ಬಸ್ ನಿಲ್ದಾಣದ ಎದುರು ಚಾಲಕನಿಗೆ ಬಾಡಿಗೆ ಹಣ ನೀಡುವ ವೇಳೆ, ತಮ್ಮ ಕೈಯಲ್ಲಿದ್ದ ಚಿನ್ನಾಭರಣಗಳಿದ್ದ ಬ್ಯಾಗ್ ಅನ್ನು ಕೆಳಗಡೆ ಇಟ್ಟಿದ್ದರು.
ಬಾಡಿಗೆ ಹಣ ನೀಡಿದ ಬಳಿಕ ಬ್ಯಾಗ್ ತೆಗೆದುಕೊಳ್ಳಲು ಮುಂದಾಗುವಷ್ಟರಲ್ಲಿ ಅದು ಕಾಣೆಯಾಗಿತ್ತು. ಸುತ್ತಮುತ್ತ ಹುಡುಕಾಡಿದರೂ ಬ್ಯಾಗ್ ಪತ್ತೆಯಾಗದ ಹಿನ್ನೆಲೆಯಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಕಳುವಾದ ಬ್ಯಾಗಿನಲ್ಲಿ 40 ಗ್ರಾಂ ತೂಕದ ಪಾಟಲಿ, 40 ಗ್ರಾಂ ತೂಕದ ಚಿನ್ನದ ಬಳೆಗಳು ಹಾಗೂ ₹7 ಸಾವಿರ ನಗದು ಹಣ ಸೇರಿದಂತೆ ಒಟ್ಟು ₹11,91,000 ಮೌಲ್ಯದ ಚಿನ್ನಾಭರಣ ಮತ್ತು ನಗದು ಇತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆ ಕುರಿತು ಮಹಿಳೆ ಮುಧೋಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande