ಕುಂಟೋಜಿಯಲ್ಲಿ ‘ಕ್ಷಯ ಮುಕ್ತ ಭಾರತ’ ಅಭಿಯಾನಕ್ಕೆ ಉತ್ತಮ ಸ್ಪಂದನೆ ; 118 ಜನರಿಗೆ ಉಚಿತ ಎಕ್ಸರೇ ಪರೀಕ್ಷೆ
ವಿಜಯಪುರ, 18 ಜೂನ್ (ಹಿ.ಸ.) : ಆಂಕರ್ : ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಆರೋಗ್ಯ ಉಪಕೇಂದ್ರದಲ್ಲಿ ಗರಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 100 ದಿನಗಳ ‘ಕ್ಷಯ ಮುಕ್ತ ಭಾರತ’ ಅಭಿಯಾನದ ಅಂಗವಾಗಿ ಉಚಿತ ಎಕ್ಸರೇ ತಪಾಸಣಾ
Xray


ವಿಜಯಪುರ, 18 ಜೂನ್ (ಹಿ.ಸ.) :

ಆಂಕರ್ : ವಿಜಯಪುರ ಜಿಲ್ಲೆಯ

ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಆರೋಗ್ಯ ಉಪಕೇಂದ್ರದಲ್ಲಿ ಗರಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 100 ದಿನಗಳ ‘ಕ್ಷಯ ಮುಕ್ತ ಭಾರತ’ ಅಭಿಯಾನದ ಅಂಗವಾಗಿ ಉಚಿತ ಎಕ್ಸರೇ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು. ಶಿಬಿರದಲ್ಲಿ ಗ್ರಾಮದ ಒಟ್ಟು 118 ಜನರು ಉಚಿತ ಎಕ್ಸರೇ ಪರೀಕ್ಷೆಯ ಸೌಲಭ್ಯವನ್ನು ಪಡೆದುಕೊಂಡರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಗರಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತೈಸಿನ್ ಶಿವಣಗಿ, ಕ್ಷಯರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಸಂಪೂರ್ಣವಾಗಿ ಗುಣಮುಖರಾಗಬಹುದು ಎಂದು ಹೇಳಿದರು.

“ಕ್ಷಯರೋಗಿಗಳು ವೈದ್ಯರ ಸಲಹೆಯಂತೆ ನಿರಂತರವಾಗಿ 6 ತಿಂಗಳ ಕಾಲ ಔಷಧ ಸೇವನೆ ಮಾಡಬೇಕು. ಚಿಕಿತ್ಸೆ ಮಧ್ಯದಲ್ಲಿ ನಿಲ್ಲಿಸಿದರೆ ರೋಗ ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ. ಎರಡು ವಾರಕ್ಕಿಂತ ಹೆಚ್ಚು ಕಾಲ ಕೆಮ್ಮು, ಜ್ವರ, ತೂಕ ಕಡಿಮೆಯಾಗುವುದು ಸೇರಿದಂತೆ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ತಕ್ಷಣವೇ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು,” ಎಂದು ಅವರು ಸಲಹೆ ನೀಡಿದರು.

ಕ್ಷಯರೋಗವು ಯಾರಿಗಾದರೂ ಬರಬಹುದಾಗಿದ್ದು, ವಿಶೇಷವಾಗಿ ಎಚ್ಐವಿ ಸೋಂಕಿತರು, ಮಧುಮೇಹ ಹೊಂದಿರುವವರು ಹಾಗೂ ಧೂಮಪಾನ ಮಾಡುವವರು ಹೆಚ್ಚಿನ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಕ್ಷಯರೋಗಿಯ ಕೆಮ್ಮು ಮತ್ತು ಸೀನುವಿಕೆಯ ಮೂಲಕ ಗಾಳಿಯಲ್ಲಿ ಹರಡುವ ರೋಗಾಣುಗಳು ಇತರರಿಗೆ ಸೋಂಕು ಉಂಟುಮಾಡಬಹುದು. ಆದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದರೆ ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು ಎಂದು ಅವರು ತಿಳಿಸಿದರು.

ಸರ್ಕಾರದ ವತಿಯಿಂದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಷಯರೋಗಕ್ಕೆ ಉಚಿತ ಪರೀಕ್ಷೆ ಹಾಗೂ ಚಿಕಿತ್ಸಾ ಸೌಲಭ್ಯ ಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಗರಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ವಿಚಾರಕ ಎಂ.ಎಸ್. ಗೌಡರ ಮಾತನಾಡಿ, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕ್ಷಯರೋಗ ಪತ್ತೆ ಕಾರ್ಯವನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಕ್ಷಯರೋಗದ ಲಕ್ಷಣಗಳು ಕಂಡುಬರುವವರು ಹಾಗೂ ದುರ್ಬಲ ವರ್ಗದವರು ಕಡ್ಡಾಯವಾಗಿ ತಪಾಸಣೆಗೆ ಒಳಪಟ್ಟು ಸರ್ಕಾರದ ಉಚಿತ ಆರೋಗ್ಯ ಸೇವೆಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎನ್.ಜಿ. ತಾಳಿಕೋಟಿ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಮಂಜುನಾಥ ಮಾಮನೆ, ಆರೋಗ್ಯ ನಿರೀಕ್ಷಕ ಎಸ್.ಬಿ. ಹೂಗಾರ, ಛಾಯಾಚಿತ್ರಣಾಧಿಕಾರಿಗಳಾದ ಈರಣ್ಣ ಕಸಬೇಗೌಡರ, ಬಸವರಾಜ ಕುಂಟೋಜಿ, ಬಸವರಾಜ ಹವೇರಿ, ಎಸ್ಟಿಎಸ್ ಶಿವರಾಜ ದೀಕ್ಷಿತ, ವಿ.ಕೆ. ಪಾಟೀಲ್, ಝೆಡ್.ಎಂ. ಬೀಳಗಿ, ಮಲ್ಲನಗೌಡ ಬಿರಾದರ ಸೇರಿದಂತೆ ಗರಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande