
ವಿಜಯಪುರ, 18 ಜೂನ್ (ಹಿ.ಸ.) :
ಆಂಕರ್ : ಬಾಂಡ್ (ನೋಟರಿ) ಮೂಲಕ ಖರೀದಿಸಿದ ಭಕ್ಷೀಸ್ ಪತ್ರಗಳು, ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಾಯಿತ ಗುಂಟಾ ಪ್ಲಾಟ್ಗಳಲ್ಲಿ ನಿರ್ಮಿಸಿರುವ ಹಾಗೂ ನಿರ್ಮಾಣ ಹಂತದಲ್ಲಿರುವ ಮನೆಗಳಿಗೆ ತಾತ್ಕಾಲಿಕ, ಶಾಶ್ವತ ಮತ್ತು ವಾಣಿಜ್ಯ ವಿದ್ಯುತ್ ಸಂಪರ್ಕ ನೀಡದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ವಿಜಯಪುರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದಲ್ಲಿ ಪ್ರತಿಭಟನೆ ನಡೆಸಿದ ಸಂಘದ ಪದಾಧಿಕಾರಿಗಳು, ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿ, ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಉಂಟಾಗುತ್ತಿರುವ ತೊಂದರೆಗಳನ್ನು ನಿವಾರಿಸುವಂತೆ ಒತ್ತಾಯಿಸಿದರು.
ಈ ವೇಳೆ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಸೈಯದ್ ಯಾಸೀನ್ ಎಲ್. ಗುಲ್ಬರ್ಗಾ ಮಾತನಾಡಿ, 2025ರ ಜುಲೈ 3ರಂದು ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 1200 ಚದರ ಅಡಿ ವರೆಗಿನ ಕಟ್ಟಡಗಳಿಗೆ ಓಸಿ (Occupancy Certificate) ಹಾಗೂ ಸಿಸಿ (Completion Certificate) ಪಡೆಯುವುದರಿಂದ ವಿನಾಯಿತಿ ನೀಡುವ ಕುರಿತು ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಆ ಆದೇಶಗಳನ್ನು ಹೆಸ್ಕಾಂ ಅಧಿಕಾರಿಗಳು ಪಾಲಿಸದೆ ವಿದ್ಯುತ್ ಸಂಪರ್ಕ ನೀಡಲು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಗುಂಟಾ ಪ್ಲಾಟ್ಗಳಲ್ಲಿ ನಿರ್ಮಿಸಿರುವ ಮನೆಗಳು ಹಾಗೂ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೆ ತಾತ್ಕಾಲಿಕ, ಶಾಶ್ವತ ಮತ್ತು ವಾಣಿಜ್ಯ ವಿದ್ಯುತ್ ಸಂಪರ್ಕ ನೀಡದೇ ಇರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರದ ಆದೇಶದಂತೆ ಅರ್ಹ ಕಟ್ಟಡಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ಇದೇ ವೇಳೆ ವಿದ್ಯುತ್ ಗುತ್ತಿಗೆದಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿದ ಸಂಘದ ಮುಖಂಡರು, ವಿದ್ಯುತ್ ಸಂಪರ್ಕ ಮಂಜೂರಾತಿ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಹೆಸ್ಕಾಂ ನಗರ ಉಪವಿಭಾಗ-1ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದೊಡ್ಡಪ್ಪ ಮೂಲಿಮನಿ ಹಾಗೂ ನಗರ ಉಪವಿಭಾಗ-2ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಕ್ಷರಬಾಶಾ ಕುರಿ ಅವರ ಕಾರ್ಯವೈಖರಿಯನ್ನು ಸಂಘದ ಪದಾಧಿಕಾರಿಗಳು ಖಂಡಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ಸದಸ್ಯರು, ವಿದ್ಯುತ್ ಸಂಪರ್ಕಕ್ಕಾಗಿ ಕಾಯುತ್ತಿರುವ ಗ್ರಾಹಕರು ಹಾಗೂ ವಿವಿಧ ರೈತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande