



ಬಳ್ಳಾರಿ, 18 ಜೂನ್ (ಹಿ.ಸ.) :
ಆ್ಯಂಕರ್ : ಕುಡತಿನಿ ಸುತ್ತಲಿನ ಗ್ರಾಮಗಳಲ್ಲಿ ಕೈಗಾರಿಕೆಗಳ ಪ್ರಾರಂಭಕ್ಕೆ ಭೂ ಸ್ವಾಧೀನ ಮಾಡಿಕೊಂಡು ನ್ಯಾಯಯುತವಾದ ಪರಿಹಾರ ನೀಡದೇ ಕೆಲಸವನ್ನೂ ನೀಡದೇ ನಿರ್ಲಕ್ಷ್ಯ ತೋರುತ್ತಿರುವ ಸರ್ಕಾರದ ಧೋರಣೆಯನ್ನು ಖಂಡಿಸಿ `ಭೂ ಸಂತ್ರಸ್ತರ ಹೋರಾಟ ಸಮಿತಿ'ಯು ಗುರುವಾರ ಕರೆ ನೀಡಿದ್ದ `ಬಳ್ಳಾರಿ ಬಂದ್' ಭಾಗಶಃ ಯಶಸ್ವಿಯಾಗಿದೆ.
ಕರ್ನಾಟಕ ಸರಕಾರ 2010 - 12 ರಲ್ಲಿ ಬಳ್ಳಾರಿ ತಾಲೂಕಿನ ವಾಡಾ ವ್ಯಾಪ್ತಿಯ, ಕುಡತಿನಿ ವ್ಯಾಪ್ತಿಯ 7 ಗ್ರಾಮಗಳ 5,000 ರೈತರ 12,887 ಎಕರೆ ಜಮೀನುಗಳನ್ನು ಬೃಹತ್ ಕೈಗಾರಿಕೆಗಳ ಪ್ರಾರಂಭಕ್ಕೆ ಸ್ವಾಧೀನ ಮಾಡಿಕೊಂಡು ಅರ್ಸೆಲ್ಲರ್, ಮಿತ್ತಲ್, ಬ್ರಹ್ಮಿಣಿ ಇನ್ನಿತರೆ ಬೃಹತ್ ಕೈಗಾರಿಕೆಗಳಿಗೆ ಭೂಮಿಯನ್ನು ನೀಡಿತ್ತು. ಆದರೆ, ಭೂ ಸ್ವಾಧೀನ ಮಾಡಿರುವ ಕೈಗಾರಿಕೆಗಳು ಭೂ ಸಂತ್ರಸ್ತರ ಕುಟುಂಬಕ್ಕೆ ಉದ್ಯೋಗ ನೀಡದೇ, ಕೈಗಾರಿಕಾ ಚಟುವಟಿಕೆಗಳನ್ನು ನಡೆಸದೇ 16 ವರ್ಷಗಳಾಗಿವೆ.
ಕೈಗಾರಿಕೆಗಳ ಪ್ರಾರಂಭಕ್ಕೆ ಆಗ್ರಹಿಸಿ ಮತ್ತು ನ್ಯಾಯಯುತವಾದ ಪರಿಹಾರಕ್ಕೆ ಆಗ್ರಹಿಸಿ 1,275 ದಿನಗಳಿಂದ `ಭೂ ಸಂತ್ರಸ್ತರ ಹೋರಾಟ ಸಮಿತಿ'ಯ ನೇತೃತ್ವದಲ್ಲಿ ಕುಡತಿನಿ, ವೇಣಿವೀರಾಪುರ, ಹರಗಿನಡೋಣಿ, ಸಿದ್ದಮ್ಮನಹಳ್ಳಿ, ಜಾನೆಕುಂಟೆ ಸೇರಿ ಭೂ ಸಂತ್ರಸ್ತರು ಕುಡತಿನಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ವಿವಿಧ ಹಂತದ ಪ್ರತಿಭಟನೆಗಳನ್ನು ನಡೆಸಿರುವ `ಭೂ ಸಂತ್ರಸ್ತರ ಹೋರಾಟ ಸಮಿತಿ'ಯು ಗುರುವಾರ `ಬಳ್ಳಾರಿ ಬಂದ್'ಗೆ ಕರೆ ನೀಡಿತ್ತು. ವಿವಿಧ ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿದ್ದವು.
ಗಡಿಗೆ ಚೆನ್ನಪ್ಪ ವೃತ್ತದಲ್ಲಿ ಪ್ರತಿಭಟನಾಕಾರರು ಸಭೆ ಸೇರಿ ಸರ್ಕಾರದ ಪ್ರತಿಕೃತಿಯನ್ನು ದಹನ ಮಾಡಿ, ಆಕ್ರೋಶ ವ್ಯಕ್ತಪಡಿಸಿದರು. ಗುರುವಾರ ಬೆಳಗ್ಗೆ 6 ಗಂಟೆಯಿಂದ ನಗರದಲ್ಲಿ ಜನಜೀವನ ಸಹಜವಾಗಿತ್ತು. ಅಂಗಡಿ-ಮುಗ್ಗಟ್ಟುಗಳು ಬಂದ್ ಆಗಿದ್ದವು. ಸರ್ಕಾರಿ ಕಚೇರಿಗಳು ಯಥಾ ಸ್ಥಿತಿಯಲ್ಲಿ ತೆರೆದಿದ್ದವು. ಜನಜೀವನವು ಸಹಜವಾಗಿತ್ತು. ಸಂಜೆ ವೇಳೆಗೆ ಮಾರುಕಟ್ಟೆ ಸಾಮಾನ್ಯವಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್