
ಬಾಗಲಕೋಟೆ, 18 ಜೂನ್ (ಹಿ.ಸ.) :
ಆಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದಲ್ಲಿ ಇರುವ 75 ಎಕರೆ ವಿಸ್ತೀರ್ಣದ ಬೃಹತ್ ಕೆರೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಇಂದು ಸಂಪೂರ್ಣ ಬರಿದಾಗಿ ನಿಂತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಕೆರೆ ತುಂಬಿಸುವ ಯೋಜನೆಗಾಗಿ ಕೋಟಿ ಕೋಟಿ ರೂಪಾಯಿ ಅನುದಾನ ಖರ್ಚಾದರೂ, ಕೆರೆಗೆ ಮಾತ್ರ ಹನಿ ನೀರು ಹರಿದುಬಾರದಿರುವುದು ಸ್ಥಳೀಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಒಂದು ಕಾಲದಲ್ಲಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ರೈತರ ಜೀವನಾಡಿಯಾಗಿದ್ದ ಈ ಕೆರೆ ಇದೀಗ ನೀರಿಲ್ಲದೆ ಬಣಗುಡುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಕೆರೆ ತುಂಬಿಸುವ ಉದ್ದೇಶದಿಂದ ಕೈಗೊಂಡ ಕಾಮಗಾರಿಗಳು ವೈಜ್ಞಾನಿಕ ರೀತಿಯಲ್ಲಿ ನಡೆಯದ ಪರಿಣಾಮ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಆಶ್ಚರ್ಯಕರ ಸಂಗತಿಯೆಂದರೆ, ನೀರಿನ ಕೊರತೆಯಿಂದ ಒಣಗಿ ನಿಂತಿರುವ ಇದೇ ಕೆರೆಯನ್ನು ಆಧರಿಸಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಳವಡಿಸಿರುವುದು ಸಾರ್ವಜನಿಕರ ಹಣದ ದುರ್ಬಳಕೆಗೆ ಕಾರಣವಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯೋಜನೆಗಳ ಹೆಸರಿನಲ್ಲಿ ಹಣ ಖರ್ಚಾಗುತ್ತಿದ್ದರೂ, ಜನರಿಗೆ ಅದರ ಪ್ರಯೋಜನ ದೊರೆಯುತ್ತಿಲ್ಲ ಎಂಬುದು ಅವರ ಆರೋಪವಾಗಿದೆ.
ಬತ್ತಿದ ಬೋರ್ವೆಲ್ಗಳು, ಸಂಕಷ್ಟದಲ್ಲಿ ರೈತರು
ಕೆರೆಯಲ್ಲಿ ನೀರು ಸಂಗ್ರಹವಾಗದ ಪರಿಣಾಮ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಭಾರೀ ಪ್ರಮಾಣದಲ್ಲಿ ಕುಸಿದಿದೆ. ರೈತರ ಪ್ರಕಾರ, ಸುಮಾರು 1 ಸಾವಿರಕ್ಕೂ ಹೆಚ್ಚು ಬೋರ್ವೆಲ್ಗಳು ಬತ್ತಿ ಹೋಗಿದ್ದು, ಬೆಳೆಗಳು ನೀರಿನ ಕೊರತೆಯಿಂದ ಒಣಗುತ್ತಿವೆ.
ಕೃಷಿ ಉಳಿಸಿಕೊಳ್ಳುವ ಸಲುವಾಗಿ ರೈತರು ಹೊಸ ಬೋರ್ವೆಲ್ಗಳನ್ನು ಕೊರೆಸಲು ಮುಂದಾಗಿದ್ದು, ಇದರಿಂದ ಹೆಚ್ಚಿನ ಸಾಲದ ಹೊರೆ ಎದುರಿಸುತ್ತಿದ್ದಾರೆ. ಮಳೆ ಹಾಗೂ ನೀರಿನ ನಿರೀಕ್ಷೆಯಲ್ಲಿರುವ ರೈತ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.
ವೈಜ್ಞಾನಿಕ ಕ್ರಮಕ್ಕೆ ರೈತರ ಆಗ್ರಹ
ಮೆಟಗುಡ್ಡ ಕೆರೆಯಲ್ಲಿ ತಕ್ಷಣ ಹೂಳು ತೆಗೆಯುವ ಕಾರ್ಯ ಕೈಗೊಳ್ಳಬೇಕು. ಕಾಲುವೆ ಮೂಲಕ ಕೆರೆಗೆ ನೀರು ಹರಿಸುವ ವೈಜ್ಞಾನಿಕ ಯೋಜನೆ ರೂಪಿಸಿ, ಕೆರೆಯನ್ನು ಪುನಶ್ಚೇತನಗೊಳಿಸಬೇಕು ಎಂದು ಸುತ್ತಮುತ್ತಲಿನ ಗ್ರಾಮಗಳ ರೈತರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಜನರ ಜೀವನಾಡಿಯಾಗಿರುವ ಕೆರೆಯನ್ನು ಉಳಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಆತಂಕವನ್ನು ರೈತರು ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande