ಬಾದಾಮಿ ಬನಶಂಕರಿದೇವಿಗೆ 106 ಕೆಜಿ ಬೆಳ್ಳಿರಥ ಸಮರ್ಪಣೆ ; ಭಕ್ತರ ಭಕ್ತಿ–ಶ್ರದ್ಧೆಗೆ ಸಾಕ್ಷಿಯಾದ ವೈಭವದ ಕಾರ್ಯಕ್ರಮ
ಬಾಗಲಕೋಟೆ, 18 ಜೂನ್ (ಹಿ.ಸ.) : ಆಂಕರ್ : ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾದ ಬಾದಾಮಿ ಸಮೀಪದ ಶ್ರೀ ಬನಶಂಕರಿದೇವಿ ದೇವಸ್ಥಾನದಲ್ಲಿ ಭಕ್ತಿಭಾವದ ವಾತಾವರಣದಲ್ಲಿ ನೂತನ ಬೆಳ್ಳಿರಥ ಸಮರ್ಪಣೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಸಹಸ್ರಾರು ಭಕ್ತರ ಸಮ್ಮುಖದಲ್ಲಿ ದೇವಿಗೆ 106 ಕೆಜಿ ಶುದ್ಧ ಬೆಳ್ಳಿ
ಬೆಳ್ಳಿ ರಥ


ಬಾಗಲಕೋಟೆ, 18 ಜೂನ್ (ಹಿ.ಸ.) :

ಆಂಕರ್ : ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾದ ಬಾದಾಮಿ ಸಮೀಪದ ಶ್ರೀ ಬನಶಂಕರಿದೇವಿ ದೇವಸ್ಥಾನದಲ್ಲಿ ಭಕ್ತಿಭಾವದ ವಾತಾವರಣದಲ್ಲಿ ನೂತನ ಬೆಳ್ಳಿರಥ ಸಮರ್ಪಣೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಸಹಸ್ರಾರು ಭಕ್ತರ ಸಮ್ಮುಖದಲ್ಲಿ ದೇವಿಗೆ 106 ಕೆಜಿ ಶುದ್ಧ ಬೆಳ್ಳಿಯ ಲೇಪನ ಹೊಂದಿರುವ ಭವ್ಯ ರಥವನ್ನು ಸಮರ್ಪಿಸಲಾಯಿತು.

ಭಕ್ತರು ಹಾಗೂ ಅರ್ಚಕರ ಬಹುದಿನಗಳ ಕನಸಿನಂತೆ, ದೇವಸ್ಥಾನದ ಭಕ್ತರ ಸಹಕಾರ, ಪ್ರೇರಣೆ ಮತ್ತು ದೇಣಿಗೆಯಿಂದ ಈ ಬೆಳ್ಳಿರಥ ನಿರ್ಮಾಣಗೊಂಡಿದೆ. ನಿಪ್ಪಾಣಿಯ ಸುರೇಶ ಶೆಟ್ಟಿ ಅವರ ನೇತೃತ್ವದಲ್ಲಿ ರಥ ನಿರ್ಮಾಣ ಕಾರ್ಯ ನಡೆದಿದ್ದು, ಕುಮಟಾದಲ್ಲಿ ಸಾಗವಾನಿ ಮರದಿಂದ ರಥವನ್ನು ತಯಾರಿಸಿ ಅದರ ಮೇಲೆ 106 ಕೆಜಿ ಬೆಳ್ಳಿಯ ಲೇಪನ ಮಾಡಲಾಗಿದೆ.

ಸುಮಾರು 15 ಲಕ್ಷ ರೂಪಾಯಿ ತಯಾರಿಕಾ ಮಜೂರಿ ಸೇರಿದಂತೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಈ ಸುಂದರ ಬೆಳ್ಳಿರಥದಲ್ಲಿ ಶ್ರೀ ಬನಶಂಕರಿದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ರಥಕ್ಕೆ ಸಿಂಹದ ಲಾಂಛನ ಹಾಗೂ ಅಷ್ಟಲಕ್ಷ್ಮಿಯರ ಕಲಾಕೃತಿಗಳನ್ನು ಅಳವಡಿಸಲಾಗಿದ್ದು, ಭಕ್ತರ ಕಣ್ಮನ ಸೆಳೆಯುವಂತಿದೆ.

ಸುಮಾರು 5 ರಿಂದ 6 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಬೆಳ್ಳಿರಥವು ಬನಶಂಕರಿ ದೇವಿಯ ಭಕ್ತರ ಶ್ರದ್ಧೆ ಮತ್ತು ಧಾರ್ಮಿಕ ಭಾವನೆಯ ಪ್ರತೀಕವಾಗಿದೆ. ಬೆಳಗ್ಗೆಯಿಂದ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ವಿಶೇಷ ಪೂಜೆಗಳು ನಡೆದವು. ಬಳಿಕ ಮಧ್ಯಾಹ್ನ 12.45ಕ್ಕೆ ಸಂಗೀತ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಬೆಳ್ಳಿರಥ ಸಮರ್ಪಣೆ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ವೆಂಕಟೇಶ ಪೂಜಾರ, ಮುಖಂಡರಾದ ಶೇಖರಗೌಡ ಪಾಟೀಲ, ಹನುಮಂತ ಮಾವಿನಮರದ ಸೇರಿದಂತೆ ಪೂಜಾರ ಮನೆತನದ ಮಹೇಶ, ಮಹಾಂತೇಶ, ವಿದ್ಯಾನಂದ, ಶಂಕರ, ಲಕ್ಷ್ಮಣ, ಚಿದಂಬರ, ಕಿರಣ, ರಮೇಶ, ಶ್ರೀನಿವಾಸ, ಶ್ರೀರಂಗ, ಉದಯ ಹಾಗೂ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.

ಬನಶಂಕರಿದೇವಿಯ ಸನ್ನಿಧಿಯಲ್ಲಿ ನಡೆದ ಈ ವೈಭವದ ಬೆಳ್ಳಿರಥ ಸಮರ್ಪಣೆ ಕಾರ್ಯಕ್ರಮವು ಭಕ್ತರಿಗೆ ಅಪೂರ್ವ ಧಾರ್ಮಿಕ ಅನುಭವ ನೀಡಿತು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande