ತಹಶೀಲ್ದಾರ್ ಗಳಿಗೆ ಬಡ್ತಿ: ದೀರ್ಘಕಾಲದ ಬೇಡಿಕೆ ಈಡೇರಿಸಿದ ಸರ್ಕಾರ
ಬೆಂಗಳೂರು, 17 ಜೂನ್ (ಹಿ.ಸ.) : ಆ್ಯಂಕರ್ : ಕಂದಾಯ ಇಲಾಖೆಯ ಗ್ರೇಡ್-2 ತಹಶೀಲ್ದಾರ್ಗಳನ್ನು ಗ್ರೇಡ್-1 ತಹಶೀಲ್ದಾರ್ ಹುದ್ದೆಗೆ ಬಡ್ತಿ ನೀಡುವ ಮೂಲಕ ರಾಜ್ಯ ಸರ್ಕಾರ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಮುಖ ಆಡಳಿತಾತ್ಮಕ ಪ್ರಕ್ರಿಯೆಗೆ ಅಂತಿಮ ರೂಪ ನೀಡಿದೆ. ಒಟ್ಟು 232 ಗ್ರೇಡ್-2 ತಹಶೀಲ್ದಾರ್ಗಳಿಗೆ
ತಹಶೀಲ್ದಾರ್ ಗಳಿಗೆ ಬಡ್ತಿ: ದೀರ್ಘಕಾಲದ ಬೇಡಿಕೆ ಈಡೇರಿಸಿದ ಸರ್ಕಾರ


ಬೆಂಗಳೂರು, 17 ಜೂನ್ (ಹಿ.ಸ.) :

ಆ್ಯಂಕರ್ : ಕಂದಾಯ ಇಲಾಖೆಯ ಗ್ರೇಡ್-2 ತಹಶೀಲ್ದಾರ್ಗಳನ್ನು ಗ್ರೇಡ್-1 ತಹಶೀಲ್ದಾರ್ ಹುದ್ದೆಗೆ ಬಡ್ತಿ ನೀಡುವ ಮೂಲಕ ರಾಜ್ಯ ಸರ್ಕಾರ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಮುಖ ಆಡಳಿತಾತ್ಮಕ ಪ್ರಕ್ರಿಯೆಗೆ ಅಂತಿಮ ರೂಪ ನೀಡಿದೆ. ಒಟ್ಟು 232 ಗ್ರೇಡ್-2 ತಹಶೀಲ್ದಾರ್ಗಳಿಗೆ ಗ್ರೇಡ್-1 ಹುದ್ದೆಗೆ ಬಡ್ತಿ ನೀಡಲಾಗಿದ್ದು, ಇದರಿಂದ ಇಲಾಖೆಯ ಅಧಿಕಾರಿಗಳ ದೀರ್ಘಕಾಲದ ಬೇಡಿಕೆ ಈಡೇರಿದಂತಾಗಿದೆ.

ಈ ಕುರಿತು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಸಂತಸ ವ್ಯಕ್ತಪಡಿಸಿದ್ದು, ಸರ್ಕಾರವು ಅರ್ಹತೆ, ಸೇವಾ ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಬಡ್ತಿ ಪ್ರಕ್ರಿಯೆಯು ಕೇವಲ ಆಡಳಿತಾತ್ಮಕ ಕ್ರಮವಲ್ಲ, ಬದಲಿಗೆ ನ್ಯಾಯಬದ್ಧ, ಪಾರದರ್ಶಕ ಮತ್ತು ಸಮಯೋಚಿತ ಆಡಳಿತಕ್ಕೆ ಸರ್ಕಾರದ ಬದ್ಧತೆಯ ಪ್ರತೀಕವಾಗಿದೆ ಎಂದು ಅವರು ಹೇಳಿದ್ದಾರೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೂಲಕ ನೌಕರರಲ್ಲಿ ಹೊಸ ವಿಶ್ವಾಸ ಮೂಡಿಸಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಲಿಷ್ಠ ಮತ್ತು ಸ್ಫೂರ್ತಿದಾಯಕ ಆಡಳಿತ ವ್ಯವಸ್ಥೆಯೇ ಪರಿಣಾಮಕಾರಿ ಆಡಳಿತದ ಮೂಲಾಧಾರವಾಗಿದೆ. ಕಂದಾಯ ಇಲಾಖೆಯು ಪ್ರತಿಯೊಬ್ಬ ನಾಗರಿಕನಿಗೂ ಪಾರದರ್ಶಕ, ಉತ್ತರದಾಯಿ ಹಾಗೂ ಕಾಳಜಿಯುತ ಸೇವೆ ಒದಗಿಸಬೇಕೆಂಬ ಸರ್ಕಾರದ ಸಂಕಲ್ಪದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪರಮೇಶ್ವರ ತಿಳಿಸಿದ್ದಾರೆ.

ಬಡ್ತಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಶ್ರಮಿಸಿದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಅಧಿಕಾರಿಗಳ ಸಹಕಾರ ಮತ್ತು ನಿರಂತರ ಪ್ರಯತ್ನಗಳು ಮುಂದಿನ ದಿನಗಳಲ್ಲಿ ಇಂತಹ ಮತ್ತಷ್ಟು ನೌಕರಪರ ನಿರ್ಧಾರಗಳನ್ನು ಕೈಗೊಳ್ಳಲು ಪ್ರೇರಣೆಯಾಗಲಿವೆ ಎಂದು ಹೇಳಿದ್ದಾರೆ.

ಬಡ್ತಿ ಪಡೆದ ಎಲ್ಲ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿರುವ ಪರಮೇಶ್ವರ, ಹೊಸ ಹುದ್ದೆಯೊಂದಿಗೆ ಬರುವ ಹೆಚ್ಚುವರಿ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ, ಜನರಿಗೆ ಇನ್ನಷ್ಟು ದಕ್ಷತೆ, ಕಾಳಜಿ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸರ್ಕಾರವು ಅಧಿಕಾರಿಗಳ ಸೇವಾ ಬದ್ಧತೆಯನ್ನು ಗುರುತಿಸುತ್ತಿದ್ದು, ಅವರ ಸಮಸ್ಯೆಗಳು ಮತ್ತು ಆಕಾಂಕ್ಷೆಗಳಿಗೆ ಸ್ಪಂದಿಸುವ ಬದ್ಧತೆಯನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ. ಸ್ವಯಂಪ್ರೇರಿತವಾಗಿ ಕಾರ್ಯನಿರ್ವಹಿಸುವ ಅಧಿಕಾರಿ ವರ್ಗ ಯಾವುದೇ ಸರ್ಕಾರದ ಅಮೂಲ್ಯ ಆಸ್ತಿಯಾಗಿದ್ದು, ನ್ಯಾಯಯುತ ಮತ್ತು ಸಮಾನ ಅವಕಾಶಗಳನ್ನು ಒದಗಿಸುವ ಆಡಳಿತ ಸಂಸ್ಕೃತಿಯನ್ನು ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಮುಂಬರುವ ದಿನಗಳಲ್ಲಿ ಕಂದಾಯ ಇಲಾಖೆಯನ್ನು ಇನ್ನಷ್ಟು ವೇಗದ, ಪಾರದರ್ಶಕ ಹಾಗೂ ಜವಾಬ್ದಾರಿಯುತ ‘ಜನಕೇಂದ್ರಿತ’ ಸಂಸ್ಥೆಯಾಗಿ ರೂಪಿಸುವ ಗುರಿ ಹೊಂದಿರುವುದಾಗಿ ತಿಳಿಸಿರುವ ಅವರು, ಅಧಿಕಾರಿಗಳ ಸಬಲೀಕರಣದ ಮೂಲಕ ನಾಗರಿಕರ ಅಗತ್ಯಗಳಿಗೆ ತ್ವರಿತವಾಗಿ ಸ್ಪಂದಿಸುವ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲಾಗುತ್ತಿದೆ ಎಂದಿದ್ದಾರೆ.

ಉತ್ತರದಾಯಿ, ಪಾರದರ್ಶಕ, ಸಂವೇದನಾಶೀಲ ಮತ್ತು ಸುಲಭವಾಗಿ ಲಭ್ಯವಾಗುವ ಸೇವಾ ಮಾದರಿಯ ಮೂಲಕ ‘ನವ ಕರ್ನಾಟಕ’ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಡಾ. ಜಿ. ಪರಮೇಶ್ವರ ಕರೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande