ಮಳೆ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ಕ್ರಮಕ್ಕೆ ಮೇಯರ್ ಕರಡಿ ಸೂಚನೆ
ವಿಜಯಪುರ, 17 ಜೂನ್ (ಹಿ.ಸ.) : ಆಂಕರ್ : ವಿಜಯಪುರ ನಗರದಲ್ಲಿ ಮಳೆಗಾಲದ ಸಂದರ್ಭದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮಳೆ ನೀರು ಸರಾಗವಾಗಿ ಹರಿದು ಹೋಗಲು ಕೋಟೆ ಗೋಡೆ ಸುತ್ತಲಿನ ಕಂದಕಗಳು ಹಾಗೂ ರಾಜ ಕಾಲುವೆಗಳಲ್ಲಿ ಸಂಗ್ರಹವಾಗಿರುವ ಮಣ್ಣು, ಹೂಳು ತೆರವುಗೊ
Sabhe


ವಿಜಯಪುರ, 17 ಜೂನ್ (ಹಿ.ಸ.) :

ಆಂಕರ್ : ವಿಜಯಪುರ ನಗರದಲ್ಲಿ ಮಳೆಗಾಲದ ಸಂದರ್ಭದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮಳೆ ನೀರು ಸರಾಗವಾಗಿ ಹರಿದು ಹೋಗಲು ಕೋಟೆ ಗೋಡೆ ಸುತ್ತಲಿನ ಕಂದಕಗಳು ಹಾಗೂ ರಾಜ ಕಾಲುವೆಗಳಲ್ಲಿ ಸಂಗ್ರಹವಾಗಿರುವ ಮಣ್ಣು, ಹೂಳು ತೆರವುಗೊಳಿಸುವ ಕಾರ್ಯವನ್ನು ತಕ್ಷಣ ಆರಂಭಿಸುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮೇಯರ್ ಎಂ.ಎಸ್. ಕರಡಿ ಸೂಚನೆ ನೀಡಿದರು.

ನಗರದ ಮಹಾನಗರ ಪಾಲಿಕೆ ಸಭಾಭವನದಲ್ಲಿ ಮಂಗಳವಾರ ನಡೆದ ಮಳೆಗಾಲದ ಸಿದ್ಧತೆ, ಬೀದಿ ದೀಪ, ಸ್ವಚ್ಛತೆ ಹಾಗೂ ಕುಡಿಯುವ ನೀರು ಪೂರೈಕೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆ ಹೆಚ್ಚಾದ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ನಗರದ ವಿವಿಧ ಭಾಗಗಳಲ್ಲಿ ಮಳೆ ನೀರು ನಿಂತು ಜನಜೀವನಕ್ಕೆ ಅಡ್ಡಿಯಾಗದಂತೆ ಒಳಚರಂಡಿ ವ್ಯವಸ್ಥೆಯನ್ನು ಪರಿಶೀಲಿಸಬೇಕು. ರಾಜ ಕಾಲುವೆಗಳು, ಚರಂಡಿಗಳು ಹಾಗೂ ಯುಜಿಡಿ ಚೇಂಬರ್ಗಳಲ್ಲಿ ತ್ಯಾಜ್ಯ ಸಂಗ್ರಹವಾಗದಂತೆ ನಿಯಮಿತವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮಳೆಗಾಲದಲ್ಲಿ ಅಪಾಯಕಾರಿ ಮರಗಳು ಹಾಗೂ ವಿದ್ಯುತ್ ತಂತಿಗಳಿಗೆ ತಾಗುವ ಮರದ ಕೊಂಬೆಗಳಿಂದ ಅಪಾಯ ಸಂಭವಿಸುವ ಸಾಧ್ಯತೆ ಇರುವುದರಿಂದ, ಅಂತಹ ಮರಗಳನ್ನು ಗುರುತಿಸಿ ಮುಂಚಿತವಾಗಿ ತೆರವುಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು. ತುರ್ತು ಪರಿಹಾರ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸಿಬ್ಬಂದಿ ಕಡ್ಡಾಯವಾಗಿ ಸುರಕ್ಷತಾ ಪರಿಕರಗಳನ್ನು ಧರಿಸಿ ಕಾರ್ಯ ನಿರ್ವಹಿಸಬೇಕು ಎಂದು ಮೇಯರ್ ಹೇಳಿದರು.

ಸಭೆಯಲ್ಲಿ ಪಾಲಿಕೆ ಸದಸ್ಯರು ಮಾತನಾಡಿ, ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ಮಳೆ ನೀರು ನುಗ್ಗದಂತೆ ಹಾಗೂ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಗರದ ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿ, ಅಗತ್ಯವಿರುವ ಕಡೆ ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಯಿತು. ಸಾರ್ವಜನಿಕರು ಹಾಗೂ ಜಾನುವಾರುಗಳ ಸುರಕ್ಷತೆಗೆ ಆದ್ಯತೆ ನೀಡುವಂತೆ ತಿಳಿಸಲಾಯಿತು.

ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು. ನೀರು ಸರಬರಾಜು ಹಾಗೂ ಒಳಚರಂಡಿ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಸೂಚಿಸಲಾಯಿತು.

ಇದೇ ವೇಳೆ ಮಹಾನಗರ ಪಾಲಿಕೆಯ ಲೋಕೋಪಯೋಗಿ ವಿಭಾಗದ ಅಧಿಕಾರಿಗಳಿಗೆ ನಗರದ ವಿವಿಧ ವಾರ್ಡ್ಗಳ ಮುಖ್ಯ ರಸ್ತೆ ಹಾಗೂ ಆಂತರಿಕ ರಸ್ತೆಗಳನ್ನು ಮಳೆಗಾಲಕ್ಕೂ ಮುನ್ನ ದುರಸ್ತಿ ಮಾಡುವಂತೆ ನಿರ್ದೇಶನ ನೀಡಲಾಯಿತು.

ಸಭೆಯಲ್ಲಿ ಮಹಾನಗರ ಪಾಲಿಕೆಯ ಚುನಾಯಿತ ಹಾಗೂ ನಾಮನಿರ್ದೇಶಿತ ಸದಸ್ಯರು, ಪಾಲಿಕೆಯ ವಿವಿಧ ವಿಭಾಗಗಳ ಅಧಿಕಾರಿಗಳು, ಜಲಮಂಡಳಿ, ಹೆಸ್ಕಾಂ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande