ಹಳ್ಳ ಹೂಳೆತ್ತುವ ಕಾಮಗಾರಿಗೆ ವೇಗ ; ನರೇಗಾ ಕೂಲಿಕಾರರ ಶ್ರಮದಿಂದ ವನಹಳ್ಳಿಯಲ್ಲಿ ಜಲಸಂರಕ್ಷಣೆಗೆ ಹೊಸ ಭರವಸೆ
ವಿಜಯಪುರ, 17 ಜೂನ್ (ಹಿ.ಸ.) : ಆಂಕರ್ : ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಗ್ರಾಮೀಣ ಅಭಿವೃದ್ಧಿ ಹಾಗೂ ಜಲಸಂರಕ್ಷಣೆಗೆ ಆದ್ಯತೆ ನೀಡುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿಯಲ್ಲಿ ತಾಳಿಕೋಟಿ ತಾಲೂಕಿನ ಬಾವೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ವನಹಳ್ಳಿ ಗ್ರಾಮದಲ್ಲ
ನರೇಗಾ


ವಿಜಯಪುರ, 17 ಜೂನ್ (ಹಿ.ಸ.) :

ಆಂಕರ್ : ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಗ್ರಾಮೀಣ ಅಭಿವೃದ್ಧಿ ಹಾಗೂ ಜಲಸಂರಕ್ಷಣೆಗೆ ಆದ್ಯತೆ ನೀಡುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿಯಲ್ಲಿ ತಾಳಿಕೋಟಿ ತಾಲೂಕಿನ ಬಾವೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ವನಹಳ್ಳಿ ಗ್ರಾಮದಲ್ಲಿ ಹಳ್ಳ ಹೂಳೆತ್ತುವ ಕಾಮಗಾರಿ ಭರದಿಂದ ಸಾಗುತ್ತಿದೆ.

ಗ್ರಾಮದ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಕೈಗೆತ್ತಿಕೊಳ್ಳಲಾಗಿರುವ ಈ ಕಾಮಗಾರಿಯಲ್ಲಿ ಒಟ್ಟು 42 ಜನ ನರೇಗಾ ಕೂಲಿಕಾರರು ಸಕ್ರಿಯವಾಗಿ ಪಾಲ್ಗೊಂಡು ಶ್ರಮಿಸುತ್ತಿದ್ದಾರೆ.

ಬೆಳಗ್ಗೆಯಿಂದಲೇ ಕೂಲಿಕಾರರು ಹಳ್ಳದ ಹೂಳೆತ್ತುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಮಳೆ ನೀರು ಸರಾಗವಾಗಿ ಹರಿಯಲು ಹಾಗೂ ಸಂಗ್ರಹವಾಗಲು ಅನುಕೂಲವಾಗುವಂತೆ ಕಾಮಗಾರಿ ನಡೆಸಲಾಗುತ್ತಿದೆ.

ಹಳ್ಳ ಹೂಳೆತ್ತುವಿಕೆಯಿಂದ ಮಳೆಗಾಲದಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಾಗಲಿದ್ದು, ಭೂಮಿಯಲ್ಲಿ ನೀರು ಇಂಗುವ ಪ್ರಮಾಣ ಹೆಚ್ಚಳವಾಗುವ ನಿರೀಕ್ಷೆಯಿದೆ. ಇದರಿಂದ ಅಂತರ್ಜಲ ಮಟ್ಟ ಸುಧಾರಣೆಗೆ ಸಹಕಾರಿಯಾಗುವುದರ ಜೊತೆಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ.

ರೈತರು ಹಾಗೂ ಗ್ರಾಮಸ್ಥರಿಗೆ ದೀರ್ಘಾವಧಿಯಲ್ಲಿ ಇದರ ಪ್ರಯೋಜನ ದೊರೆಯಲಿದೆ.

ನರೇಗಾ ಯೋಜನೆಯು ಕೇವಲ ಉದ್ಯೋಗ ನೀಡುವ ಯೋಜನೆಯಷ್ಟೇ ಅಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಶಾಶ್ವತ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಜನಜೀವನ ಸುಧಾರಣೆಗೆ ನೆರವಾಗುತ್ತಿದೆ. ಗ್ರಾಮೀಣ ಕುಟುಂಬಗಳಿಗೆ ಆದಾಯದ ಭದ್ರತೆ ಒದಗಿಸುವುದರೊಂದಿಗೆ ಕೆರೆ, ಹಳ್ಳ, ರಸ್ತೆ, ಜಲಸಂಗ್ರಹಣಾ ಘಟಕಗಳಂತಹ ಸಾರ್ವಜನಿಕ ಆಸ್ತಿಗಳ ನಿರ್ಮಾಣಕ್ಕೂ ಈ ಯೋಜನೆ ಮಹತ್ವದ ಕೊಡುಗೆ ನೀಡುತ್ತಿದೆ.

ವನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಈ ಕಾಮಗಾರಿಯು “ಕಾಯಕವೇ ಕೈಲಾಸ” ಎಂಬ ಆಶಯಕ್ಕೆ ತಕ್ಕಂತೆ ಗ್ರಾಮಸ್ಥರ ಸಹಭಾಗಿತ್ವದೊಂದಿಗೆ ಮುನ್ನಡೆಯುತ್ತಿದ್ದು, ಗ್ರಾಮೀಣ ಅಭಿವೃದ್ಧಿಗೆ ಹೊಸ ಚೈತನ್ಯ ತುಂಬುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande