ಗಿಡಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ : ಸಿ.ಎಸ್. ಶಿವನಗೌಡ್ರ
ಗದಗ, 17 ಜೂನ್ (ಹಿ.ಸ.) : ಆ್ಯಂಕರ್ : ಪರಿಸರ ಸಂರಕ್ಷಣೆ ಇಂದಿನ ಕಾಲಘಟ್ಟದ ಅತ್ಯಂತ ಮಹತ್ವದ ಅಗತ್ಯವಾಗಿದ್ದು, ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಪ್ರತಿಯೊಬ್ಬ ನಾಗರಿಕರೂ ಪ್ರಕೃತಿ ಉಳಿವಿನ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗ
ಫೋಟೋ


ಗದಗ, 17 ಜೂನ್ (ಹಿ.ಸ.) :

ಆ್ಯಂಕರ್ : ಪರಿಸರ ಸಂರಕ್ಷಣೆ ಇಂದಿನ ಕಾಲಘಟ್ಟದ ಅತ್ಯಂತ ಮಹತ್ವದ ಅಗತ್ಯವಾಗಿದ್ದು, ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಪ್ರತಿಯೊಬ್ಬ ನಾಗರಿಕರೂ ಪ್ರಕೃತಿ ಉಳಿವಿನ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಕರೆ ನೀಡಿದರು.

ಗದಗ ನಗರದ ಸಿ.ಡಿ.ಒ. ಜೈನ್ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಿ.ಡಿ.ಒ. ಜೈನ್ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ ದಿನಾಚರಣೆಯನ್ನು ಆಚರಿಸುವುದು ಎಂದರೆ ಭೂಮಿತಾಯಿಯ ಆರಾಧನೆ ಮಾಡಿದಂತೆ ಎಂದು ಅವರು ಅಭಿಪ್ರಾಯಪಟ್ಟರು. ಪರಿಸರದ ಸಮತೋಲನ ಕಾಪಾಡುವಲ್ಲಿ ಮರಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕನಿಷ್ಠ ಒಂದು ಗಿಡವನ್ನು ನೆಟ್ಟು ಅದರ ಪೋಷಣೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು.

ವಾಯು ಮಾಲಿನ್ಯ ಮತ್ತು ಪರಿಸರ ಹಾನಿ ಇಂದು ವಿಶ್ವದಾದ್ಯಂತ ಆತಂಕಕಾರಿ ಮಟ್ಟಕ್ಕೆ ತಲುಪಿದೆ. ಪರಿಸರವನ್ನು ರಕ್ಷಿಸಲು ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಬದುಕು ಒದಗಿಸಲು ಗಿಡಮರಗಳ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಶಾಲೆಗಳು, ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸ್ಥಳಗಳು ಹಾಗೂ ಖಾಸಗಿ ಜಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ನೆಟ್ಟು ಸಂರಕ್ಷಿಸಬೇಕಾಗಿದೆ ಎಂದು ಅವರು ಹೇಳಿದರು.

ಮಹಾತ್ಮ ಗಾಂಧೀಜಿಯವರ “ಭೂಮಿ ನಮ್ಮ ಅಗತ್ಯಗಳನ್ನು ಪೂರೈಸುತ್ತದೆ, ಆದರೆ ನಮ್ಮ ದುರಾಸೆಗಳನ್ನು ಅಲ್ಲ” ಎಂಬ ಸಂದೇಶವನ್ನು ಉಲ್ಲೇಖಿಸಿದ ಶಿವನಗೌಡ್ರ ಅವರು, ಮಾನವನ ಅತಿಯಾದ ಸ್ವಾರ್ಥ ಹಾಗೂ ಪ್ರಕೃತಿಯ ಮೇಲಿನ ದೌರ್ಜನ್ಯದಿಂದ ಪರಿಸರ ಸಮತೋಲನ ಹದಗೆಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಭೂಮಿಯ ಅತಿಯಾದ ಶೋಷಣೆಯಿಂದ ಉಷ್ಣಾಂಶ ಹೆಚ್ಚುತ್ತಿದ್ದು, ಮಳೆಯ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ಇದರ ಪರಿಣಾಮ ಕೃಷಿ ಸೇರಿದಂತೆ ಜೀವನದ ಎಲ್ಲ ಕ್ಷೇತ್ರಗಳ ಮೇಲೂ ಬೀಳುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಜೀವನ ಮೌಲ್ಯಗಳ ಕುರಿತು ಸಲಹೆ ನೀಡಿದ ಅವರು, ಮೊಬೈಲ್ ಬಳಕೆಯ ಅತಿಯಾದ ಅವಲಂಬನೆ ಮಕ್ಕಳಲ್ಲಿ ಓದು ಮತ್ತು ಸೃಜನಶೀಲತೆಯ ಆಸಕ್ತಿಯನ್ನು ಕುಗ್ಗಿಸುತ್ತಿದೆ ಎಂದರು. ನಿಯಮಿತ ಆಹಾರ ಪದ್ಧತಿ, ಆರೋಗ್ಯಕರ ಜೀವನಶೈಲಿ ಹಾಗೂ ಪರಿಸರದೊಂದಿಗೆ ನಂಟು ಬೆಳೆಸಿಕೊಳ್ಳುವುದು ಉತ್ತಮ ಸಮಾಜ ನಿರ್ಮಾಣಕ್ಕೆ ಅಗತ್ಯವಾಗಿದೆ ಎಂದು ಹೇಳಿದರು.

ಪ್ರತಿಯೊಬ್ಬರೂ ತಮ್ಮ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಟ್ಟು ಪೋಷಿಸಿದರೆ, ಅದು ಪ್ರಕೃತಿಗೆ ಸಲ್ಲಿಸುವ ಅತ್ಯುತ್ತಮ ಗೌರವವಾಗುತ್ತದೆ. ಗಿಡಗಳು ಕೇವಲ ನೆರಳು ಮತ್ತು ಆಮ್ಲಜನಕ ನೀಡುವುದಲ್ಲ, ಮುಂದಿನ ಪೀಳಿಗೆಗೆ ಬದುಕಿನ ಆಧಾರವಾಗಿವೆ ಎಂದು ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕರಾದ ಶ್ರೀಮತಿ ಗೀತಾ ಕುಲಕರ್ಣಿ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಹೇಳಿದರು. ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಎಲ್ಲರೂ ಶ್ರಮಿಸಬೇಕಿದ್ದು, ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮರಗಳನ್ನು ಕಡಿದು ನಾಶಪಡಿಸುವುದು ಮಾನವ ಕುಲದ ವಿನಾಶಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದ ಅವರು, ರೈತರು ತಮ್ಮ ಜಮೀನಿನ ಬದುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಗಳನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು. ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಉಲ್ಲೇಖಿಸಿದ ಅವರು, ಪ್ಲಾಸ್ಟಿಕ್ ಮುಕ್ತ ರಾಜ್ಯ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಲೋಹಿತ್ ಕುಮಾರ್ ಪಿ.ಜೆ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿವಿಧ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು. ಪರಿಸರ ಉಳಿವಿಗಾಗಿ ಸಾರ್ವಜನಿಕರು ಹೆಚ್ಚಿನ ಜವಾಬ್ದಾರಿ ವಹಿಸಬೇಕು. ಮನೆಗೊಂದು ಮರ ಬೆಳೆಸಿ ಉಳಿಸುವ ಮೂಲಕ ಪ್ರಕೃತಿಗೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನಗರ ಮತ್ತು ಜಿಲ್ಲೆಯ ವಿವಿಧ ಶಾಲೆಗಳಿಂದ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಿ ಗೌರವಿಸಲಾಯಿತು. ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಮಹತ್ವದ ಪ್ರಯತ್ನವನ್ನು ಆಯೋಜಕರು ಕೈಗೊಂಡಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು, ಶಿಕ್ಷಣ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಪರಿಸರ ಪ್ರೇಮಿಗಳು ಭಾಗವಹಿಸಿದ್ದರು. ಪರಿಸರ ಸಂರಕ್ಷಣೆ ಕುರಿತ ಸಂದೇಶಗಳು, ವಿದ್ಯಾರ್ಥಿಗಳ ಕಲಾಕೃತಿಗಳು ಮತ್ತು ಪ್ರಬಂಧಗಳು ಸಮಾರಂಭದ ವಿಶೇಷ ಆಕರ್ಷಣೆಯಾಗಿದ್ದವು.

ಒಟ್ಟಾರೆ, ವಿಶ್ವ ಪರಿಸರ ದಿನಾಚರಣೆಯ ಸಮಾರೋಪ ಸಮಾರಂಭವು ಪರಿಸರ ಸಂರಕ್ಷಣೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸುವ ಜೊತೆಗೆ, ಗಿಡಮರಗಳ ಸಂರಕ್ಷಣೆ ಮತ್ತು ಹಸಿರು ವಾತಾವರಣ ನಿರ್ಮಾಣದತ್ತ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande