
ಬಾಗಲಕೋಟೆ, 17 ಜೂನ್ (ಹಿ.ಸ.) :
ಆಂಕರ್ : ಹಿರಿಯ ರಾಜಕಾರಣಿ ಹಾಗೂ ಅನುಭವಿ ನಾಯಕ ಎಚ್.ಕೆ. ಪಾಟೀಲರು ಜಾತಿ, ವರ್ಗದ ಮಿತಿಗಳನ್ನು ಮೀರಿ ಎಲ್ಲರನ್ನೂ ಸಮಾನವಾಗಿ ನೋಡುವ ಪ್ರಬುದ್ಧ ಹಾಗೂ ಪ್ರಾಮಾಣಿಕ ರಾಜಕಾರಣಿಯಾಗಿದ್ದು, ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಬಾಗಲಕೋಟೆ ನಗರದ ಹಿರಿಯ ವಕೀಲ ಎನ್.ಎಚ್. ಗೌಡರ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಎಚ್.ಕೆ. ಪಾಟೀಲರು ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿ ನಿಷ್ಠೆ, ಸರಳತೆ ಹಾಗೂ ಜನಪರ ಕಾಳಜಿಯೊಂದಿಗೆ ಸೇವೆ ಸಲ್ಲಿಸಿದ್ದಾರೆ. ಅಧಿಕಾರಕ್ಕಿಂತ ಜನಸೇವೆ ಮುಖ್ಯ ಎಂಬ ತತ್ವವನ್ನು ಪಾಲಿಸಿಕೊಂಡು ಬಂದಿರುವ ಅವರು, ಆಡಳಿತ ಅನುಭವ ಹೊಂದಿರುವ ಸಮರ್ಥ ನಾಯಕರು ಎಂದು ಹೇಳಿದರು.
ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಗೌರವ ಮತ್ತು ವಿಶ್ವಾಸವನ್ನು ಹೊಂದಿರುವ ಎಚ್.ಕೆ. ಪಾಟೀಲರು ಯಾವುದೇ ಜಾತಿ ಅಥವಾ ಸಮುದಾಯದ ಆಧಾರದ ಮೇಲೆ ಗುರುತಿಸಿಕೊಳ್ಳದೆ, ಎಲ್ಲ ವರ್ಗದ ಜನರ ಹಿತಕ್ಕಾಗಿ ಶ್ರಮಿಸುತ್ತಿರುವ ನಾಯಕರು. ಇಂತಹ ಪ್ರಬುದ್ಧ ನಾಯಕತ್ವಕ್ಕೆ ಹೆಚ್ಚಿನ ಜವಾಬ್ದಾರಿ ನೀಡುವ ಅಗತ್ಯವಿದೆ ಎಂದು ಎನ್.ಎಚ್. ಗೌಡರ ಅಭಿಪ್ರಾಯಪಟ್ಟರು.
ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ, ಆಡಳಿತಾತ್ಮಕ ಅನುಭವ ಹಾಗೂ ಪಕ್ಷ ಸಂಘಟನೆಯಲ್ಲಿ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಎಚ್.ಕೆ. ಪಾಟೀಲರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿದರೆ ರಾಜ್ಯದ ಆಡಳಿತಕ್ಕೆ ಮತ್ತಷ್ಟು ಬಲ ಬರಲಿದೆ ಎಂದು ಅವರು ಹೇಳಿದರು.
ಎಚ್.ಕೆ. ಪಾಟೀಲರಂತಹ ಅನುಭವಿ ಮತ್ತು ಪ್ರಾಮಾಣಿಕ ನಾಯಕರಿಗೆ ಸೂಕ್ತ ಸ್ಥಾನಮಾನ ನೀಡುವುದು ಪಕ್ಷದ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಅಗತ್ಯವಾಗಿದೆ ಎಂದು ಎನ್.ಎಚ್. ಗೌಡರ ಒತ್ತಾಯಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande