
ಬಾಗಲಕೋಟೆ, 17 ಜೂನ್ (ಹಿ.ಸ.) :
ಆಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಮುಂಗಾರು ಆರಂಭಕ್ಕೂ ಮುನ್ನ ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ನೀರಿನ ಸರಾಗ ಹರಿವಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಇದರ ಭಾಗವಾಗಿ ನಗರದ ಮಂಟೂರ ರಸ್ತೆದಿಂದ ಮಂಡಬಸಪ್ಪನ ದೇವಸ್ಥಾನದವರೆಗೆ ಇರುವ ಘಟಪ್ರಭಾ ಎಡದಂಡೆ ಉಪ ಕಾಲುವೆಯ ಸ್ವಚ್ಛತಾ ಕಾರ್ಯವನ್ನು ಜಿಎಲ್ಬಿಸಿ (ಘಟಪ್ರಭಾ ಎಡದಂಡೆ ಕಾಲುವೆ) ಸಿಬ್ಬಂದಿ ಕೈಗೊಂಡಿದ್ದಾರೆ.
ಉಪ ಕಾಲುವೆಯಲ್ಲಿ ಹಲವು ದಿನಗಳಿಂದ ಹೂಳು, ಕಸ ಹಾಗೂ ತ್ಯಾಜ್ಯ ಸಂಗ್ರಹವಾಗಿದ್ದರಿಂದ ನೀರಿನ ಹರಿವಿಗೆ ತೊಂದರೆಯಾಗುವ ಸಾಧ್ಯತೆ ಇತ್ತು. ಇದನ್ನು ಗಮನಿಸಿದ ಜಿಎಲ್ಬಿಸಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೆಸಿಬಿ ಯಂತ್ರದ ಸಹಾಯದಿಂದ ಸ್ವಚ್ಛತಾ ಕಾರ್ಯ ನಡೆಸಿದರು.
ಕಾಲುವೆಯಲ್ಲಿದ್ದ ಹೆಚ್ಚಿನ ಪ್ರಮಾಣದ ಹೂಳು ಹಾಗೂ ತ್ಯಾಜ್ಯವನ್ನು ತೆರವುಗೊಳಿಸಿ ನೀರು ಸುಗಮವಾಗಿ ಹರಿಯುವಂತೆ ಕ್ರಮ ವಹಿಸಲಾಯಿತು.
ಮುಂಗಾರು ಸಂದರ್ಭದಲ್ಲಿ ಕಾಲುವೆ ಮೂಲಕ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪಿಸುವ ಉದ್ದೇಶದಿಂದ ಈ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಕಾಲುವೆಯ ನಿರ್ವಹಣೆ ಹಾಗೂ ಸ್ವಚ್ಛತೆಯಿಂದ ನೀರಿನ ಹರಿವಿನ ವೇಗ ಹೆಚ್ಚಾಗಿ, ರೈತರಿಗೆ ಅನುಕೂಲವಾಗಲಿದೆ ಎಂದು ಜಿಎಲ್ಬಿಸಿ ಸಿಬ್ಬಂದಿ ತಿಳಿಸಿದ್ದಾರೆ.
ಕಾಲುವೆಯ ವಿವಿಧ ಭಾಗಗಳಲ್ಲಿ ಇನ್ನೂ ಅಗತ್ಯವಿರುವ ಸ್ವಚ್ಛತಾ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುಂಗಾರು ಪೂರ್ವದಲ್ಲಿ ಕೈಗೊಂಡಿರುವ ಈ ಕ್ರಮದಿಂದ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande