
ಬಾಗಲಕೋಟೆ, 17 ಜೂನ್ (ಹಿ.ಸ.) :
ಆಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಜೆ.ಕೆ. ಕಾರ್ಖಾನೆ ವಿರುದ್ಧ ರೈತರು ಆರಂಭಿಸಿರುವ ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಉಪವಿಭಾಗಾಧಿಕಾರಿ (ಎಸಿ) ಶ್ವೇತಾ ಬೀಡಿಕರ ಅವರು ಧರಣಿ ಹಿಂಪಡೆಯುವಂತೆ ಮಾಡಿದ ಮನವಿಯನ್ನು ಹೋರಾಟಗಾರರು ತಿರಸ್ಕರಿಸಿದ್ದಾರೆ. ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ರೈತರು ಸ್ಪಷ್ಟಪಡಿಸಿದ್ದಾರೆ.
ಜೆ.ಕೆ. ಕಾರ್ಖಾನೆ ವಿರುದ್ಧ ವಾಯು ಮಾಲಿನ್ಯ, ಕುಡಿಯುವ ನೀರು ಕಲುಷಿತಗೊಳ್ಳುತ್ತಿರುವುದು ಸೇರಿದಂತೆ ಹಲವು ಆರೋಪಗಳನ್ನು ಮುಂದಿಟ್ಟುಕೊಂಡು ರೈತರು ಜೂನ್ 15ರಿಂದ ಧರಣಿ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅವರು ಹೋರಾಟಗಾರರೊಂದಿಗೆ ಚರ್ಚೆ ನಡೆಸಿದರು.
ಕಾರ್ಖಾನೆ ವಿರುದ್ಧ ಮಾಡಿರುವ ಆರೋಪಗಳ ಕುರಿತು ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಸಮಿತಿ ರಚಿಸಲಾಗಿದೆ. ಸಮಿತಿಯು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಕನಿಷ್ಠ 15ರಿಂದ 20 ದಿನಗಳ ಕಾಲಾವಕಾಶ ಅಗತ್ಯವಿದೆ. ಅಲ್ಲಿಯವರೆಗೆ ಹೋರಾಟವನ್ನು ಸ್ಥಗಿತಗೊಳಿಸುವಂತೆ ಎಸಿ ಅವರು ಮನವಿ ಮಾಡಿದರು.
ಆದರೆ ಎಸಿ ಅವರ ಮನವಿಗೆ ಪ್ರತಿಕ್ರಿಯಿಸಿದ ಹೋರಾಟಗಾರರು, ಸಮಿತಿ ವರದಿ ಬರುವವರೆಗೂ ಹೋರಾಟ ಹಿಂಪಡೆಯಲು ಸಿದ್ಧ. ಆದರೆ ವರದಿ ನೀಡುವವರೆಗೆ ಕಾರ್ಖಾನೆ ಕಾರ್ಯಾಚರಣೆ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಕಾರ್ಖಾನೆ ಬಂದ್ ಮಾಡದೇ ಹೋರಾಟ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ನಮಗೆ ನ್ಯಾಯ ದೊರೆಯುವವರೆಗೂ ಧರಣಿ ಮುಂದುವರಿಯಲಿದೆ ಎಂದು ಹೋರಾಟಗಾರರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ರೈತರ ಹೋರಾಟ ಮುಂದುವರಿದ ಹಿನ್ನೆಲೆಯಲ್ಲಿ ಜೆ.ಕೆ. ಕಾರ್ಖಾನೆ ವಿಚಾರ ಇದೀಗ ಆಡಳಿತ ಮಂಡಳಿ ಮತ್ತು ರೈತರ ನಡುವಿನ ಪ್ರಮುಖ ಚರ್ಚೆಯ ವಿಷಯವಾಗಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ಹರಿದಿದೆ
ಹಿಂದೂಸ್ತಾನ್ ಸಮಾಚಾರ್ / jyothi deshpande