
ಬಾಗಲಕೋಟೆ, 17 ಜೂನ್ (ಹಿ.ಸ.) :
ಆಂಕರ್ : ವಿದ್ಯುತ್ ನಿಗಮಗಳ ಖಾಸಗೀಕರಣ ಪ್ರಸ್ತಾವನೆಯನ್ನು ವಿರೋಧಿಸಿ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಪಟ್ಟಣದಲ್ಲಿ ರೈತರು ಒಗ್ಗೂಡಿ ಪ್ರತಿಭಟನೆ ನಡೆಸಿ, ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು.
ವಿದ್ಯುತ್ ಕ್ಷೇತ್ರವು ಸಾರ್ವಜನಿಕ ಸೇವೆಯ ಪ್ರಮುಖ ಅಂಗವಾಗಿದ್ದು, ಇದನ್ನು ಖಾಸಗೀಕರಣ ಮಾಡುವುದರಿಂದ ರೈತರು, ಬಡವರು ಹಾಗೂ ಸಾಮಾನ್ಯ ಗ್ರಾಹಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ರೈತ ಮುಖಂಡರು ಅಭಿಪ್ರಾಯಪಟ್ಟರು. ವಿದ್ಯುತ್ ಸರಬರಾಜು ವ್ಯವಸ್ಥೆ ರೈತ ಸ್ನೇಹಿಯಾಗಿ ಮುಂದುವರಿಯಬೇಕು ಹಾಗೂ ಯಾವುದೇ ರೀತಿಯ ಖಾಸಗೀಕರಣದ ನಿರ್ಧಾರ ಕೈಬಿಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ರೈತರ ಕೃಷಿ ಚಟುವಟಿಕೆಗಳಿಗೆ ಸಮರ್ಪಕ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಅಗತ್ಯವಿದ್ದು, ವಿದ್ಯುತ್ ನಿಗಮಗಳನ್ನು ಖಾಸಗಿ ಕಂಪನಿಗಳಿಗೆ ವಹಿಸುವುದರಿಂದ ವಿದ್ಯುತ್ ದರ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಬಹುದು ಎಂದು ಮುಖಂಡರು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಂಡು ಪಕಾಲಿ, ಶಿವಲಿಂಗ ಟಿರಕಿ, ಲಕ್ಷ್ಮಣ ಬ್ಯಾಳಿ, ಬಸು ಮೇಲೋಡಿ, ರಾಜೇಂದ್ರ ಮಿರ್ಜಿ, ಬಿ.ಸಿ. ಜಮಖಂಡಿ, ಗಜಪ್ಪ ಬಾಗಿ, ಪ್ರಕಾಶ ಹುಂಡರಗಿ, ಯಲ್ಲಪ್ಪ ತುರಾದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ರೈತರ ಹಿತದೃಷ್ಟಿಯಿಂದ ವಿದ್ಯುತ್ ನಿಗಮಗಳ ಖಾಸಗೀಕರಣದ ನಿರ್ಧಾರದಿಂದ ಹಿಂದೆ ಸರಿಯುವಂತೆ ಆಗ್ರಹಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande