ಬಿಡದಿ ಭೂಸ್ವಾಧೀನ ವಿರೋಧಿಸಿ ರಾಹುಲ್ ಗಾಂಧಿಗೆ ನೂರಾರು ರೈತರ ಪತ್ರ
ಬೆಂಗಳೂರು, 17 ಜೂನ್ (ಹಿ.ಸ.) : ಆ್ಯಂಕರ್ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಬಿಡದಿ ಸಮಗ್ರ ಟೌನ್ಶಿಪ್–ಎಐ ಸಿಟಿ’ ಯೋಜನೆಗಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಬಿಡದಿ ಭಾಗದ ರೈತರ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಯೋಜನೆಗಾಗಿ ರೈತರ ಜಮೀನುಗಳನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್
Letter


ಬೆಂಗಳೂರು, 17 ಜೂನ್ (ಹಿ.ಸ.) :

ಆ್ಯಂಕರ್ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಬಿಡದಿ ಸಮಗ್ರ ಟೌನ್ಶಿಪ್–ಎಐ ಸಿಟಿ’ ಯೋಜನೆಗಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಬಿಡದಿ ಭಾಗದ ರೈತರ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಯೋಜನೆಗಾಗಿ ರೈತರ ಜಮೀನುಗಳನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ರೈತರು, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ನೇರವಾಗಿ ಪತ್ರ ಬರೆದು ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಇತ್ತೀಚೆಗೆ ರಾಹುಲ್ ಗಾಂಧಿಗೆ ಪತ್ರ ಬರೆದು ರೈತರ ಪರವಾಗಿ ಧ್ವನಿ ಎತ್ತುವಂತೆ ಕೋರಿದ್ದ ಹಿನ್ನೆಲೆಯಲ್ಲಿ, ಇದೀಗ 100ಕ್ಕೂ ಹೆಚ್ಚು ರೈತರು ಸಹ ಅದೇ ಹಾದಿಯಲ್ಲಿ ಪತ್ರ ಚಳುವಳಿ ಆರಂಭಿಸಿದ್ದಾರೆ.

ರೈತರ ಪರವಾಗಿ ಮಾತನಾಡಿರುವ ನಿಖಿಲ್ ಕುಮಾರಸ್ವಾಮಿ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಹಲವು ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದಾರೆ. 2013ರ ಭೂಸ್ವಾಧೀನ ಕಾಯ್ದೆಯ ನಿಯಮಗಳನ್ನು ಪಾಲಿಸದೆ, ಸಾರ್ವಜನಿಕ ಸಭೆಗಳನ್ನು ನಡೆಸದೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ ಎಂದು ಅವರು ದೂರಿದ್ದಾರೆ.

ಇದಲ್ಲದೆ, ಭೂಸ್ವಾಧೀನದಿಂದ ಬಾಧಿತರಾಗುತ್ತಿರುವವರಲ್ಲಿ ಶೇ.82ಕ್ಕೂ ಹೆಚ್ಚು ಮಂದಿ ಸಣ್ಣ ಮತ್ತು ಅತಿ ಸಣ್ಣ ರೈತರು, ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದು, ಅವರ ಜೀವನೋಪಾಯಕ್ಕೆ ಗಂಭೀರ ಹೊಡೆತ ಬೀಳಲಿದೆ ಎಂದು ಅವರು ಹೇಳಿದ್ದಾರೆ.

ಹಣಕಾಸು ಇಲಾಖೆಯ ವಿರೋಧದ ನಡುವೆಯೂ ವಸತಿ ಮತ್ತು ನಗರಾಭಿವೃದ್ಧಿ ನಿಗಮದ ಮೂಲಕ ಭಾರಿ ಪ್ರಮಾಣದ ಸಾಲ ಪಡೆದು, ಫಲವತ್ತಾದ ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್ ಉದ್ದೇಶಗಳಿಗೆ ಬಳಸುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪವನ್ನೂ ನಿಖಿಲ್ ಕುಮಾರಸ್ವಾಮಿ ಮಾಡಿದ್ದಾರೆ.

ಇತ್ತ ರೈತರ ಪತ್ರ ಚಳುವಳಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಸರ್ಕಾರ ಕೂಡಲೇ ಭೂಸ್ವಾಧೀನ ಅಧಿಸೂಚನೆಯನ್ನು ಹಿಂಪಡೆಯದಿದ್ದರೆ ಜೂನ್ 21ರಂದು ಗ್ರಾಮ ಮಟ್ಟದಲ್ಲಿ ಬೃಹತ್ ಪಾದಯಾತ್ರೆ ನಡೆಸಿ, ಬಳಿಕ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ಜೆಡಿಎಸ್ ಹಾಗೂ ರೈತ ಸಂಘಟನೆಗಳ ಮುಖಂಡರು ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande