
ವಿಜಯಪುರ, 17 ಜೂನ್ (ಹಿ.ಸ.) :
ಆಂಕರ್ : ವಿಜಯಪುರ ಜಿಲ್ಲೆಯ ಕೋಲ್ಹಾರ ಪುನರ್ವಸತಿ ಕೇಂದ್ರದ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಬಾಕಿ ಉಳಿದಿದ್ದ ಅರ್ಜಿಗಳ ಪರಿಶೀಲನಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ದಿನಾಂಕ 12-06-2026 ರಂದು ಪುನರ್ವಸತಿ ಕಚೇರಿ (ಕೋಲ್ಹಾರ) ವತಿಯಿಂದ ನಿಯೋಜಿಸಲಾದ ನುರಿತ ಸಿಬ್ಬಂದಿ ತಂಡವು ಅರ್ಜಿದಾರರ ನಿವೇಶನ ಸಂಬಂಧಿತ ದಾಖಲೆಗಳು ಹಾಗೂ ಸ್ಥಳ ಪರಿಶೀಲನೆಯನ್ನು ಜಂಟಿಯಾಗಿ ನಡೆಸಿತು.
ಪರಿಶೀಲನೆ ವೇಳೆ ಸರ್ಕಾರದ ನಿಯಮಾವಳಿಗಳು, ಅರ್ಜಿದಾರರ ಅರ್ಹತೆ, ದಾಖಲೆಗಳ ಸತ್ಯಾಸತ್ಯತೆ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಲಾಯಿತು. ಪರಿಶೀಲನಾ ಪ್ರಕ್ರಿಯೆಯ ನಂತರ ಅರ್ಹ ಹಾಗೂ ಅನರ್ಹ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿ, ಸಾರ್ವಜನಿಕರ ಮಾಹಿತಿಗಾಗಿ ಕೋಲ್ಹಾರ ಪಟ್ಟಣ ಪಂಚಾಯತಿಯಲ್ಲಿ ಪ್ರಕಟಿಸಲಾಗಿದೆ.
ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಯ ಸದುಪಯೋಗ ದೊರೆಯುವಂತೆ ಕ್ರಮ ವಹಿಸಲಾಗಿದೆ.
ಪ್ರಕಟಿಸಲಾದ ಪಟ್ಟಿಯನ್ನು ಪರಿಶೀಲಿಸಿ, ಸಂಬಂಧಿಸಿದವರು ತಮ್ಮ ಹೆಸರು ಹಾಗೂ ವಿವರಗಳನ್ನು ಖಚಿತಪಡಿಸಿಕೊಳ್ಳಬಹುದು.
ಕೋಲ್ಹಾರ ಪುನರ್ವಸತಿ ಕೇಂದ್ರದ ಅಭಿವೃದ್ಧಿ ಹಾಗೂ ಪುನರ್ವಸತಿ ಕಾರ್ಯಗಳಲ್ಲಿ ಆಡಳಿತದ ಈ ಕ್ರಮವು ಮಹತ್ವದ ಹೆಜ್ಜೆಯಾಗಿದ್ದು, ಫಲಾನುಭವಿಗಳ ಆಯ್ಕೆಯಲ್ಲಿ ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಗೆ ಆದ್ಯತೆ ನೀಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande