
ಕೋಲಾರ, ೧೭ ಜೂನ್ (ಹಿ.ಸ) :
ಆಂಕರ್ : ಪ್ರತಿ ವಿದ್ಯಾರ್ಥಿಯಲ್ಲೂ ಅಗಾಧವಾದ ಶಕ್ತಿ ಇದ್ದು, ಅದನ್ನು ಹೊರತೆಗೆಯುವ ಕೆಲಸ ಶಿಕ್ಷಕರಿಂದ ಆಗಬೇಕು, ಮಕ್ಕಳಲ್ಲಿ ಕಲಿಕೆಯ ಛಲ ಮೂಡಿಸಿ ಸಾಧನೆಯತ್ತ ಮುನ್ನುಗ್ಗುವ ಶಕ್ತಿಯನ್ನು ತುಂಬಬೇಕು, ನಿಮ್ಮ ಶಾಲೆಗಳ ನೆರವಿಗೆ ನಾವಿದ್ದೇವೆ ಎಂದು ಎಪ್ಸನ್ ಇಂಡಿಯಾ ಕಂಪನಿಯ ಮಾನವ ಸಂಪನ್ಮೂಲ ಅಭಿವೃದ್ದಿ ಅಧಿಕಾರಿ ರಾಜೇಂದ್ರ ಕುಮಾರ್ ಸಿಂಗ್ ತಿಳಿಸಿದರು.
ನಗರದ ಮೆಥೋಡಿಸ್ಟ್ ಶಾಲೆ ಆವರಣದಲ್ಲಿ ಎಪ್ಸನ್ ಕಂಪನಿ ಅಧ್ಯಕ್ಷ ಎನ್.ಸಾಂಭಮೂರ್ತಿ ಮಾರ್ಗದರ್ಶನದಲ್ಲಿ ಕೊಡುಗೆಯಾಗಿ ನೀಡಿರುವ ಸುಮಾರು ೨ ಕೋಟಿ ಮೌಲ್ಯದ ೨ ಲಕ್ಷ ನೋಟ್ಪುಸ್ತಕಗಳು, ೧ ರಿಂದ ೫ನೇ ತರಗತಿ ಮಕ್ಕಳಿಗೆ ಬ್ಯಾಗ್ಗಳನ್ನು ಸರ್ಕಾರಿ ಶಾಲೆಗಳಿಗೆ ಹಸ್ತಂತರಿಸಿ ಮಾತನಾಡಿದರು.
ಕಲಿಕೆಗೆ ಶ್ರದ್ಧೆ,ಛಲ, ನಿರ್ಧಿಷ್ಟ ಗುರಿಯಿದ್ದರೆ ಸಾಕು, ಕಷ್ಟಪಟ್ಟು ಕಲಿಯುವುದಕ್ಕಿಂತ ಇಷ್ಟಪಟ್ಟು ಕಲಿಯುವುದು ಮುಖ್ಯ, ಅಂತಹ ವಾತಾವರಣವನ್ನು ಶಿಕ್ಷಕರು ಮೂಡಿಸಬೇಕು, ಮಕ್ಕಳನ್ನು ಸಮಾಜಕ್ಕೆ ಕೊಡುಗೆ ನೀಡುವಂತೆ ಬೆಳೆಸಬೇಕು. ಕಳೆದ ೨೦ ವರ್ಷಗಳಿಂದ ಸರ್ಕಾರಿ ಶಾಲೆಗಳಿಗೆ ನೆರವಾಗುತ್ತಿದ್ದೇವೆ, ಈ ವರ್ಷ ನೋಟ್ ಪುಸ್ತಕಗಳ ಜತೆಗೆ ೧ ರಿಂದ ೫ನೇ ತರಗತಿ ಮಕ್ಕಳಿಗೆ ಬ್ಯಾಗ್ ನೀಡುತ್ತಿದ್ದು, ಮುಂದಿನ ವರ್ಷ ೬ ನೇ ತರಗತಿಯಿಂದ ೧೦ನೇ ತರಗತಿವರೆಗಿನ ಮಕ್ಕಳಿಗೆ ಬ್ಯಾಗ್ ನೀಡಲಾಗುವುದು. ನಾವು ನೀಡುತ್ತಿರುವ ನೋಟ್ ಪುಸ್ತಕ ಮತ್ತು ಶೈಕ್ಷಣಿಕ ಸಲಕರಣೆಗಳನ್ನು ಸದ್ಬಳಕೆ ಮಾಡಿಕೊಳ್ಳಿ, ನಿಮ್ಮ ಸಾಧನೆಗೆ ಇನ್ನಷ್ಟು ನೆರವು ನೀಡಲು ನಾವು ಸಿದ್ದರಿದ್ದೇವೆ ಎಂದರು.
ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿ ವಿಜಯ್ ಗೋವಿಂದ್ ಮಾತನಾಡಿ, ನಮ್ಮ ಸಂಸ್ಥೆಯ ಅಧ್ಯಕ್ಷರಾದ ಎನ್.ಸಾಂಭಮೂರ್ತಿ ಅವರ ಶೈಕ್ಷಣಿಕ ಹಾಗೂ ಸರ್ಕಾರಿ ಶಾಲಾ ಮಕ್ಕಳ ಬಗೆಗಿನ ಕಾಳಜಿಯ ಪ್ರತೀಕವಾಗಿ ಈ ನೆರವನ್ನು ಜಿಲ್ಲೆಗೆ ಹರಿಸುತ್ತಿದ್ದು, ನಮ್ಮ ಪ್ರಯತ್ನಕ್ಕೆ ಶಿಕ್ಷಕರ ಬಳಗ ಕೈಜೋಡಿಸಿ ಮಕ್ಕಳಿಗೆ ಪಾರದರ್ಶಕವಾಗಿ ತಲುಪುವಂತೆ ಮಾಡುತ್ತಿದೆ. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲ್ಮಾಸ್ ಫರ್ವೀನ್ ತಾಜ್ ಮಾತನಾಡಿ, ಪ್ರತಿ ವರ್ಷ ಕೋಟ್ಯ0ತರ ರೂ ಮೌಲ್ಯದ ಪರಿಕರಗಳ ನೆರವನ್ನು ಸರ್ಕಾರಿ ಶಾಲೆಗಳಿಗೆ ಎಪ್ಸನ್ ಕಂಪನಿ ಹರಿಸಿದೆ, ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಳಕ್ಕೆ ಮತ್ತು ಬಲವರ್ಧನೆಗೆ ಇದು ಸಹಕಾರಿಯಾಗಿದೆ ಎಂದು ತಿಳಿಸಿ, ಶಾಲೆಯಲ್ಲಿ ಕೆಲಸ ಮಾಡುವುದು ಖುಷಿ ನೀಡುತ್ತದೆ, ಇಲ್ಲಿಗೆ ಬರೋದು ಬಿಪಿಎಲ್ ಮಕ್ಕಳೇ ಹೆಚ್ಚಿದ್ದಾರೆ ಅವರಿಗೆ ನ್ಯಾಯ ಒದಗಿಸುವುದು ಶಿಕ್ಷಕರಾಗಿ ನಿಮ್ಮ ಜವಾಬ್ದಾರಿಯಾಗಿದೆ. ತಾಲ್ಲೂಕು ಸಮನ್ವಯಾಧಿಕಾರಿ ರಾಧಮ್ಮ ಮಾತನಾಡಿ, ಎಪ್ಸನ್ ಕಂಪನಿ ಮತ್ತು ಶಿಕ್ಷಕ ಗೆಳೆಯರ ಬಳಗದ ಕಾರ್ಯ ಶ್ಲಾಘನೀಯವಾಗಿದೆ, ಸರ್ಕಾರಿ ಶಾಲೆಗಳಿಗೆ ಶೌಚಾಲಯ, ಫಿಲ್ಟರ್, ನೋಟ್ ಪುಸ್ತಕ ಬ್ಯಾಗ್, ಶಾಲಾ ಕಟ್ಟಡಗಳಿಗೆ ಸುಣ್ಣಬಣ್ಣ, ಹೊಸ ಕಟ್ಟಡಗಳ ನಿರ್ಮಾಣ ಹೀಗೆ ನೂರಾರು ಕೆಲಸಗಳನ್ನು ಮಾಡುತ್ತಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳೋಣ ಎಂದರು.
ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಖಾಸಗಿ ಪೈಪೋಟಿಗೆ ಎದುರಾಗಿ ಸದೃಢಗೊಳಿಸುವ ಕಾರ್ಯಕ್ಕೆ ನೆರವಾಗುತ್ತಿರುವ ಎಪ್ಸನ್ ಕಂಪನಿಯ ಸಹಕಾರವನ್ನು ಪ್ರಶಂಶಿಸಿ, ಬಳಗ ನೀವು ನೀಡಿರುವ ಸೌಲಭ್ಯಗಳನ್ನು ಶಾಲಾ ಮಕ್ಕಳಿಗೆ ಪ್ರಾಮಾಣಿಕವಾಗಿ ತಲುಪಿಸುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಗೆಳೆಯರ ಬಳಗದ ಉಪಾಧ್ಯಕ್ಷ ವೀರಣ್ಣಗೌಡ, ಎಪ್ಸನ್ ಕಂಪನಿ ೧೦ ವರ್ಷಗಳಿಂದ ಕೋಲಾರ ತಾಲ್ಲೂಕಿನ ಎಲ್ಲಾ ಶಾಲೆಗಳು, ಮಾಲೂರು,ಮುಳಬಾಗಿಲು,ಶ್ರೀನಿವಾಸಪುರ ಆಯ್ದ ಶಾಲೆಗಳಿಗೆ ನೆರವು ನೀಡುತ್ತಿದೆ. ಶಾಲಾ ಬ್ಯಾಗ್ಸ್,೨೧೨ ಶಾಲೆಗಳಿಗೆ ಸಾವಿರ ವಾಟರ್ ಫಿಲ್ಟರ್ಗಳು, ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ಸೌಲಭ್ಯ, ಎಕ್ಸಾಂ ಬೋರ್ಡ್, ವಿಜ್ಞಾನಕಿಟ್ ವಿತರಿಸಿರುವುದಾಗಿ ತಿಳಿಸಿ ಕಂಪನಿ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿ, ಫಿಲ್ಟರ್ ರಿಪೇರಿ ಮಾಡಿಕೊಡಲಾಗುವುದು, ಸರಿಯಿಲ್ಲದಿದ್ದರೆ ಹೊಸ ಫಿಲ್ಟರ್ ನೀಡಲಾಗುವುದು, ಒಟ್ಟಾರೆ ನೀಡಿದ ಕೊಡುಗೆ ದುರುಪಯೋಗವಾದಂತೆ ನೋಡಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಉಪ ನಿರ್ದೇಶಕರ ಕಚೇರಿಯ ಶರಣಪ್ಪ ಜಮಾದಾರ್,ಇಸಿಒ ನಂಜು0ಡಗೌಡ, ಗೆಳೆಯರ ಬಳಗದ ಖಜಾಂಚಿ ಚಂದ್ರಪ್ಪ, ಸಂಘಟನಾ ಕಾರ್ಯದರ್ಶಿ ವೆಂಕಟರಾ0, ಸಿಆರ್ಪಿ ಗಂಗಾಧರ್, ಶಿಕ್ಷಕರಾದ ರಮೇಶ್,ಮಂಜುನಾಥ್ ಚಂದ್ರಶೇಖರ್, ಸುಭಾಷ್ ಶಾಲೆಯ ಮುಖ್ಯಶಿಕ್ಷಕ ವೇಣುಗೋಪಾಲ್, ಪಾಪಣ್ಣ, ರಾಮಚಂದ್ರೇಗೌಡ ಮತ್ತಿತರರು ಸಹಕಾರ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್