
ಕೋಲಾರ, ಜೂ.೧೭ (ಹಿ.ಸ) :
ಆ್ಯಂಕರ್ : ಬೆಸ್ಕಾಂ ಸೇರಿದಂತೆ ವಿವಿಧ ಎಸ್ಕಾಂಗಳಲ್ಲಿನ ವಿದ್ಯುತ್ ವಿತರಣಾಜಾಲ ಹಾಗೂ ನಿರ್ವಹಣೆಯನ್ನು ಟಾಟಾ ಪವರ್ ಕಂಪನಿಗೆ ವಹಿಸಲು ಮುಂದಾಗಿರುವ ಕ್ರಮವನ್ನು ವಿರೋಧಿಸಿ ಒಗ್ಗಟ್ಟಿನಿಂದ ಹೋರಾಡಲು ತೀರ್ಮಾನ ಕೈಗೊಳ್ಳಲಾಗಿದೆ. ನಗರದ ಕೆಇಬಿ ಸಮುದಾಯ ಭವನದಲ್ಲಿ ಬುಧವಾರ ವಿದ್ಯುತ್ ಖಾಸಗೀಕರಣ ವಿರೋಧಿಸಿ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ವಿವಿಧ ಸಂಘಟನೆಗಳ ಮುಖಂಡರ ತುರ್ತು ಸಮಾಲೋಚನೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ರೈತ ಸಂಘ, ದಲಿತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಪದಾಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು, ನೌಕರರು ಕೆಪಿಟಿಸಿಎಲ್ ನೌಕರರ ಸಂಘದವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಖಾಸಗೀಕರಣ ಮಾಡುವ ಪ್ರಸ್ತಾವವನ್ನು ಎಲ್ಲರೂ ತಿರಸ್ಕರಿಸಿದರು. ಆದಾಗ್ಯೂ ಖಾಸಗೀಕರಣದತ್ತ ಹೆಜ್ಜೆ ಇಟ್ಟರೆ ಹೋರಾಟ ಮಾಡಲು ಸರ್ವಾನುಮತದಿಂದ ತೀರ್ಮಾನ ಅಂಗೀಕರಿಸಲಾಯಿತು. ಪತ್ರ ಚಳವಳಿ ನಡೆಸಲು ಸಲಹೆಗಳು ಬಂದವು.
ಸಿಎಂಆರ್ ಶ್ರೀನಾಥ್ ಮಾತನಾಡಿ, ಕೋಲಾರ ಸೇರಿದಂತೆ ೧೯ ಜಿಲ್ಲೆಗಳಲ್ಲಿ ಖಾಸಗೀಕರಣದ ಪ್ರಕ್ರಿಯೆ ನಡೆಯುತ್ತಿದೆ. ಬರೀ ಎಸ್ಕಾಂಗಳ ನೌಕರರು ಮಾತ್ರವಲ್ಲ; ಬಡವರ, ರೈತರು ಸಾಮಾನ್ಯ ಜನರಿಗೂ ಸಮಸ್ಯೆ ಉಂಟಾಗಲಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್ಸಿ) ಆಕ್ಷೇಪಣೆ ಸಲ್ಲಿಸಲು ಜೂನ್ ೨೩ರವರೆಗೆ ಅವಕಾಶವಿದೆ. ನೌಕರರು, ಸಣ್ಣ ವ್ಯಾಪಾರಿಗಳು, ಸಣ್ಣ ಉದ್ಯಮದಾರರು ಸೇರಿದಂತೆ ಸಂಬAಧಪಟ್ಟ ಎಲ್ಲಾ ಗ್ರಾಹಕರು ಆಕ್ಷೇಪಣೆ ಸಲ್ಲಿಸಬೇಕು. ಖಾಸಗೀಕರಣದ ಯತ್ನದಿಂದ ಸರ್ಕಾರ ಹಿಂದೆ ಸರಿಯಬೇಕು ಎಂದು ಹೇಳಿದರು.
ಪ್ರತಿ ಕ್ಷೇತ್ರದಲ್ಲಿ ಶಾಸಕರನ್ನು ಭೇಟಿಯಾಗಿ ಖಾಸಗೀಕರಣ ಮಾಡದಂತೆ ಮನವಿಪತ್ರ ಸಲ್ಲಿಸಬೇಕು. ಒಕ್ಕೊರಲಿನಿಂದ ಹೋರಾಟ ನಡೆಸಬೇಕು. ಖಾಸಗೀಕರಣವನ್ನು ಖಂಡಿಸಬೇಕು. ಇದು ಪ್ರಜ್ಞಾವಂತರ ಜವಾಬ್ದಾರಿ. ಎಸ್ಕಾಂಗಳ ೮೪ ಸಾವಿರ ಉದ್ಯೋಗಿಗಳು ಹಾಗೂ ೫೪ ಸಾವಿರ ಪಿಂಚಣಿದಾರರ ಬದುಕು ಇದರಲ್ಲಿ ಅಡಗಿದೆ. ಕೆಪಿಟಿಸಿಎಲ್, ಎಸ್ಕಾಂ ಸಂಸ್ಥೆ ಕನ್ನಡ ನಾಡಿನದ್ದು. ಉಗ್ರ ಹೋರಾಟದ ಮೂಲಕ ನಮ್ಮ ಸಂಸ್ಥೆ ಉಳಿಸಬೇಕು ಎಂದು ಕರೆ ನೀಡಿದರು.
ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ಪ್ರಭುತ್ವವು ಕಾರ್ಪೊರೇಟ್ ಸಂಸ್ಥೆಗಳ ದಳ್ಳಾಳಿಗಳಾದಾಗ ಈ ಸಮಸ್ಯೆ ಉದ್ಭವಿಸುತ್ತದೆ. ಕ್ರಿಯೆಗೆ ಪ್ರತಿಕ್ರಿಯೆ ಆದರೆ ಹೋರಾಟ ಯಶಸ್ವಿ ಆಗಲ್ಲ. ದೆಹಲಿಯಲ್ಲಿ ರೈತರು ನಡೆಸಿದ ಹೋರಾಟದಂತೆ ನಡೆಯಬೇಕು. ಮಾದರಿ ಹೋರಾಟ ರೂಪಿಸಬೇಕು. ಜನವಾದಿ ಸಂಘಟನೆಯ ವಿ.ಗೀತಾ, ಖಾಸಗೀಕರಣದಿಂದ ಸಿಬ್ಬಂದಿಗೆ ಮಾತ್ರವಲ್ಲ; ಎಲ್ಲಾ ಸಾಮಾನ್ಯ ಜನರಿಗೆ ಸಮಸ್ಯೆ ಆಗುತ್ತದೆ. ಹಲವು ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಬೀದಿಗಿಳಿದು ಹೋರಾಟ ನಡೆಸಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ಖಾಸಗೀಕರಣಕ್ಕೆ ಪಕ್ಷಗಳೇ ಕಾರಣ. ಎಲ್ಲಾ ಜಿಲ್ಲೆಗಳಲ್ಲಿ ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದರು.
ಭೀಮಸೇನೆ ರಾಜ್ಯ ಅಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ ಮಾತನಾಡಿ, ಬೀದಿಗಿಳಿದು ಕಾಕ್ರೋಚ್ ಸಂಘಟನೆಗೆ ಮೀರಿದ ಹೋರಾಟ ನಡೆಸಬೇಕು. ಖಾಸಗಿಯಾದರೆ ನಮ್ಮ ಹಕ್ಕು ಚಲಾಯಿಸಲು ಆಗಲ್ಲ ಎಂದು ತಿಳಿಸಿದರು.
ವಿವಿಧ ಸಂಘಟನೆಗಳು, ಪಕ್ಷಗಳ ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ಟಿ.ವಿಜಯಕುಮಾರ್, ವಿಜಯಕೃಷ್ಣ, ನಾರಾಯಣಗೌಡ, ಕೆ.ಎಸ್.ಗಣೇಶ್, ಎನ್.ಎನ್ ಶ್ರೀರಾಮ್, ವರದೇನಹಳ್ಳಿ ವೆಂಕಟೇಶ್, ನಾಗರಾಜ್, ಅಬ್ಬಣಿ ಶಿವಪ್ಪ, ವಕ್ಕಲೇರಿ ರಾಜಪ್ಪ, ಕಲ್ವಮಂಜಲಿ ರಾಮು, ಮಾಗೇರಿ ನಾರಾಯಣಸ್ವಾಮಿ, ಹೂಹಳ್ಳಿ ನಾಗರಾಜ್ ಇದ್ದರು.
ಸೂಪರಿಂಟೆ0ಡೆ0ಟ್ ಎಂಜಿನಿಯರ್ ದೇವಿ ರೆಡ್ಡಿ, ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್, ಕೆಪಿಟಿಸಿಎಲ್ ನೌಕರರ ಒಕ್ಕೂಟದ ವೆಂಕಟೇಶ್, ಅಂಥೋಣಿ ದಾಸ್ ಹಾಗೂ ನೌಕರರು ಇದ್ದರು. ಸಭೆಯ ಬಳಿಕ ವಿವಿಧ ಸಂಘಟನೆಗಳ ಮುಖಂಡರು ನಗರದ ಡೂಂಲೈಟ್ ಸರ್ಕಲ್ನಲ್ಲಿ ಸಾಂಕೇತಿಕವಾಗಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್