
ವಿಜಯಪುರ, 17 ಜೂನ್ (ಹಿ.ಸ.) :
ಆಂಕರ್ : ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಉತ್ತರ ಕರ್ನಾಟಕದ ಪ್ರಬಲ ರೈತ ನಾಯಕರಾದ ಮಾನ್ಯ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದಲ್ಲಿ ಅವರ ಅಭಿಮಾನಿಗಳು ಪಕ್ಷಾತೀತವಾಗಿ ಬೃಹತ್ ಪ್ರತಿಭಟನೆ ನಡೆಸಿದರು.
ಲಕ್ಷ್ಮಣ ಸವದಿ ಅವರು ಉತ್ತರ ಕರ್ನಾಟಕ ಭಾಗದ ರೈತರು, ಕಾರ್ಮಿಕರು ಹಾಗೂ ಸಾಮಾನ್ಯ ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಜನಪರ ನಾಯಕರು. ಅವರ ಅನುಭವ, ಆಡಳಿತ ಸಾಮರ್ಥ್ಯ ಹಾಗೂ ಸಂಘಟನಾ ಶಕ್ತಿಯನ್ನು ಪರಿಗಣಿಸಿ ರಾಜ್ಯ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಅಭಿಮಾನಿಗಳು, “ಉತ್ತರ ಕರ್ನಾಟಕದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿರುವ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡುವುದು ಈ ಭಾಗದ ಜನರ ಗೌರವದ ಪ್ರಶ್ನೆಯಾಗಿದೆ. ಅವರಿಗೆ ಸೂಕ್ತ ಸ್ಥಾನಮಾನ ದೊರೆಯಬೇಕು” ಎಂದು ಆಗ್ರಹಿಸಿದರು.
ಲಕ್ಷ್ಮಣ ಸವದಿ ಅವರು ಮಾಜಿ ಉಪಮುಖ್ಯಮಂತ್ರಿಯಾಗಿ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ರೈತಪರ ನಿಲುವು ಹೊಂದಿರುವ ನಾಯಕರೆಂದು ಅಭಿಮಾನಿಗಳು ಬಣ್ಣಿಸಿದರು. ಪಕ್ಷದ ಭೇದ ಮರೆತು ವಿವಿಧ ವರ್ಗಗಳ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಸರ್ಕಾರ ಹಾಗೂ ಪಕ್ಷದ ನಾಯಕರು ಉತ್ತರ ಕರ್ನಾಟಕದ ಪ್ರಾತಿನಿಧ್ಯವನ್ನು ಗಮನದಲ್ಲಿಟ್ಟುಕೊಂಡು ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದರು. ಕರ್ನಾಟಕದ ಇತ್ತೀಚಿನ ಸಚಿವ ಸಂಪುಟ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಹಂಚಿಕೆ ಕುರಿತು ರಾಜಕೀಯ ಚರ್ಚೆಗಳು ನಡೆಯುತ್ತಿವೆ.
ಹಿಂದೂಸ್ತಾನ್ ಸಮಾಚಾರ್ / jyothi deshpande