
ಗದಗ, 17 ಜೂನ್ (ಹಿ.ಸ.) :
ಆ್ಯಂಕರ್ : ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯನ್ನು ಸಮಯೋಚಿತವಾಗಿ ಹಾಗೂ ದೋಷರಹಿತವಾಗಿ ನಡೆಸುವುದು ಅತ್ಯಂತ ಮಹತ್ವದ್ದಾಗಿದ್ದು, ಯಾವುದೇ ಕಾರಣಕ್ಕೂ ವಿಳಂಬ ನೋಂದಣಿಗೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಗದಗ ಜಿಲ್ಲಾಡಳಿತ ಭವನದಲ್ಲಿ ನಡೆದ ಜನನ-ಮರಣ ನೋಂದಣಿ ಪದ್ಧತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಪ್ರಗತಿ ಪರಿಶೀಲನೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳ ಜನನ-ಮರಣ ನೋಂದಣಿ ವೈದ್ಯಾಧಿಕಾರಿಗಳು ಕಡ್ಡಾಯವಾಗಿ ಡಿಜಿಟಲ್ ಕೀ ಹೊಂದಿರಬೇಕು. ಈ ವಿಷಯದಲ್ಲಿ ಯಾವುದೇ ವಿನಾಯಿತಿ ಅಥವಾ ಕಾರಣಗಳನ್ನು ಒಪ್ಪಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜನನ ಮತ್ತು ಮರಣ ನೋಂದಣಿ ಸರಿಯಾದ ಸಂದರ್ಭದಲ್ಲಿ ಹಾಗೂ ನಿಗದಿತ ಅವಧಿಯೊಳಗೆ ನಡೆಯುವಂತೆ ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ನೋಂದಣಿ ಪ್ರಕ್ರಿಯೆಯಲ್ಲಿ ಎದುರಾಗುತ್ತಿರುವ ಅಡೆತಡೆಗಳನ್ನು ಸಭೆಯ ಗಮನಕ್ಕೆ ತಂದು ಅವುಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳುವ ಮೂಲಕ ಪ್ರಗತಿ ಸಾಧಿಸಬೇಕು ಎಂದು ಸೂಚಿಸಿದರು.
ನೋಂದಣಿ ಕಾರ್ಯದಲ್ಲಿ ನಿರೀಕ್ಷಿತ ಪ್ರಗತಿ ಕಾಣದಿದ್ದರೆ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿಗಳು, ಜನನ ಮತ್ತು ಮರಣ ನೋಂದಣಿಯು ಮುಂದಿನ ದಿನಗಳಲ್ಲಿ ನಾಗರಿಕರಿಗೆ ಅಗತ್ಯವಾಗುವ ವಿವಿಧ ದಾಖಲೆಗಳು, ಸರ್ಕಾರಿ ಸೌಲಭ್ಯಗಳು ಹಾಗೂ ಕಾನೂನು ಪ್ರಕ್ರಿಯೆಗಳಿಗೆ ಮೂಲ ಆಧಾರವಾಗಿರುವುದರಿಂದ ಈ ಕಾರ್ಯದಲ್ಲಿ ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಪುನರುಚ್ಚರಿಸಿದರು.
ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಬಿ ಎಸ್ ಪಾಟೀಲ ಮಾಹಿತಿ ನೀಡಿ, ಜಿಲ್ಲೆಯಲ್ಲಿನ 2 ಆಸ್ಪತ್ರೆಗಳು ನಿಗದಿತ ಅವಧಿಯೊಳಗೆ ಜನನ-ಮರಣ ನೋಂದಣಿ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿ ಉತ್ತಮ ಸಾಧನೆ ತೋರಿವೆ ಎಂದು ತಿಳಿಸಿದರು. ಇತರೆ ಆಸ್ಪತ್ರೆಗಳೂ ಇದೇ ಮಾದರಿಯನ್ನು ಅನುಸರಿಸಿ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ಜನವರಿ ಯಿಂದ ಮೇ 2026ರ ಅಂತ್ಯದ ಅಂಕಿಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 6,994 ಜನನ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 5,090 (72.78%) ಪ್ರಕರಣಗಳು ನಿಗದಿತ ಅವಧಿಯೊಳಗೆ ನೋಂದಣಿಯಾಗಿವೆ. ತಾಲೂಕುವಾರು ಪರಿಶೀಲನೆಯಲ್ಲಿ ಗದಗ ತಾಲೂಕು 76.43% ಹಾಗೂ ಮುಂಡರಗಿ ತಾಲೂಕು 76.56% ಸಮಯೋಚಿತ ನೋಂದಣಿಯೊಂದಿಗೆ ಉತ್ತಮ ಸಾಧನೆ ಮಾಡಿವೆ. ಶಿರಹಟ್ಟಿ ತಾಲೂಕು 73.68%, ಲಕ್ಷ್ಮೇಶ್ವರ 75.79% ಮತ್ತು ನರಗುಂದ 73.56% ಪ್ರಗತಿ ದಾಖಲಿಸಿವೆ. ರೋಣ ತಾಲೂಕು 47.11% ಸಾಧನೆಯೊಂದಿಗೆ ಹಿಂದುಳಿದಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 3,872 ಮರಣ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 2,830 (73.09%) ಪ್ರಕರಣಗಳು ನಿಗದಿತ ಅವಧಿಯೊಳಗೆ ನೋಂದಣಿಯಾಗಿವೆ. ತಾಲೂಕುವಾರು ಪರಿಶೀಲನೆಯಲ್ಲಿ ಗದಗ ತಾಲೂಕು 71.68% ಹಾಗೂ ಮುಂಡರಗಿ ತಾಲೂಕು 73.77%, ಶಿರಹಟ್ಟಿ ತಾಲೂಕು 79.51%, ಲಕ್ಷ್ಮೇಶ್ವರ 68.47% ಮತ್ತು ನರಗುಂದ 73.63%, ರೋಣ ತಾಲೂಕು 69.91% ಪ್ರಗತಿ ಸಾಧನೆ ಮಾಡಿವೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರ, ಭೂದಾಖಲೆಗಳ ಉಪನಿರ್ದೇಶಕ ರುದ್ರಣ್ಣಗೌಡ ಜಿ.ಜೆ., ವಾರ್ತಾಧಿಕಾರಿ ವಸಂತ ಮಡ್ಲೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರಾಧಾ ಮಣ್ಣೂರ, ಆನಂದ ಬದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯನ್ನು ಸಮಯೋಚಿತವಾಗಿ ಹಾಗೂ ದೋಷರಹಿತವಾಗಿ ನಡೆಸುವುದು ಅತ್ಯಂತ ಮಹತ್ವದ್ದಾಗಿದೆ. ಯಾವುದೇ ಕಾರಣಕ್ಕೂ ವಿಳಂಬ ನೋಂದಣಿಗೆ ಅವಕಾಶ ನೀಡಬಾರದು. ಎಲ್ಲಾ ಸರ್ಕಾರಿ ಆಸ್ಪತ್ರೆಗಳ ನೋಂದಣಿ ವೈದ್ಯಾಧಿಕಾರಿಗಳು ಕಡ್ಡಾಯವಾಗಿ ಡಿಜಿಟಲ್ ಕೀ ಹೊಂದಿರಬೇಕು. ನೋಂದಣಿ ಕಾರ್ಯದಲ್ಲಿ ನಿರೀಕ್ಷಿತ ಪ್ರಗತಿ ಕಾಣದಿದ್ದರೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ. ಎಂದು ಡಿಸಿ ಸಿ ಎನ್ ಶ್ರೀಧರ್ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP