ಸೈಕಲ್ ಬಳಕೆ ಆರೋಗ್ಯ, ಪರಿಸರ ಸಂರಕ್ಷಣೆಗೆ ಪೂರಕ : ಕುಲಪತಿ ವಿಜಯಾ ಕೋರಿಶೆಟ್ಟಿ
ವಿಜಯಪುರ, 17 ಜೂನ್ (ಹಿ.ಸ.) : ಆಂಕರ್ : ಸೈಕಲ್ ಸವಾರಿಯು ಯುವಜನರ ಆರೋಗ್ಯ ರಕ್ಷಣೆಗೆ ಮಾತ್ರವಲ್ಲದೆ ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಗೂ ಮಹತ್ವದ ಕೊಡುಗೆ ನೀಡುತ್ತದೆ ಎಂದು ವಿಜಯಪುರ ಜಿಲ್ಲೆಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆ
ಸೈಕಲ್


ವಿಜಯಪುರ, 17 ಜೂನ್ (ಹಿ.ಸ.) :

ಆಂಕರ್ : ಸೈಕಲ್ ಸವಾರಿಯು ಯುವಜನರ ಆರೋಗ್ಯ ರಕ್ಷಣೆಗೆ ಮಾತ್ರವಲ್ಲದೆ ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಗೂ ಮಹತ್ವದ ಕೊಡುಗೆ ನೀಡುತ್ತದೆ ಎಂದು ವಿಜಯಪುರ ಜಿಲ್ಲೆಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಸಂಘದ ಮಾರ್ಗಸೂಚಿಯಂತೆ ಹಾಗೂ “ಪ್ರತಿ ರವಿವಾರ ಸೈಕಲ್ನೊಂದಿಗೆ” ಎಂಬ ಧ್ಯೇಯದಡಿ ಆಯೋಜಿಸಿದ್ದ ವಿಶ್ವ ಸೈಕಲ್ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದಿನ ಆಧುನಿಕ ಜೀವನಶೈಲಿಯಲ್ಲಿ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಸೈಕಲ್ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸೈಕಲ್ ಸವಾರಿಯಿಂದ ದೇಹಕ್ಕೆ ಉತ್ತಮ ವ್ಯಾಯಾಮ ದೊರೆಯುವುದರ ಜೊತೆಗೆ ಇಂಧನ ಉಳಿತಾಯವಾಗುತ್ತದೆ. ಅಲ್ಲದೆ ವಾಹನಗಳಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ತಗ್ಗಿಸಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.

ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ಹೆಚ್ಚಿನ ಪ್ರಮಾಣದಲ್ಲಿ ಸೈಕಲ್ ಬಳಕೆ ಮಾಡುವಂತೆ ಉತ್ತೇಜಿಸಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಸೈಕಲ್ ಬಳಕೆಯನ್ನು ದಿನನಿತ್ಯದ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡರೆ ಆರೋಗ್ಯಕರ ಜೀವನಶೈಲಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕುಲಪತಿ ವಿಜಯಾ ಕೋರಿಶೆಟ್ಟಿ ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಏಕಲವ್ಯ ಪ್ರಶಸ್ತಿ ಪುರಸ್ಕೃತೆ ಹಾಗೂ ಖ್ಯಾತ ಸೈಕ್ಲಿಸ್ಟ್ ಡಾ. ಸವಿತಾ ಅಣ್ಣೆಪ್ಪ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಸೈಕಲ್ ಬಳಕೆ ಕಡಿಮೆಯಾಗುತ್ತಿರುವುದರಿಂದ ಇಂಧನದ ಮೇಲಿನ ಅವಲಂಬನೆ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ವಿವಿಧ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುತ್ತಿವೆ.

ಪ್ರತಿಯೊಬ್ಬರೂ ಸೈಕಲ್ ಸವಾರಿಯನ್ನು ಪ್ರೋತ್ಸಾಹಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.

ಸೈಕಲ್ ಸವಾರಿಯು ದೇಹ ಮತ್ತು ಮನಸ್ಸಿಗೆ ಚೈತನ್ಯ ನೀಡುವ ಸರಳ ಹಾಗೂ ಪರಿಣಾಮಕಾರಿ ವ್ಯಾಯಾಮವಾಗಿದೆ. ಯುವ ಪೀಳಿಗೆ ಸೈಕಲ್ ಬಳಕೆಯ ಮಹತ್ವವನ್ನು ಅರಿತು ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಕ್ರೀಡಾ ನಿರ್ದೇಶಕ ಪ್ರೊ. ಹನುಮಂತಯ್ಯ ಪೂಜಾರಿ, ಸಹಾಯಕ ನಿರ್ದೇಶಕ ಡಾ. ವಿಶ್ವನಾಥ ಎಂ. ನಡಕಟ್ಟಿ, ಡಾ. ರಾಜಕುಮಾರ ಮಾಲಿಪಾಟೀಲ, ಡಾ. ಶ್ರೀನಿವಾಸ, ಡಾ. ಜ್ಯೋತಿ ಉಪಾದ್ಯ, ಡಾ. ಜ್ಯೋತಿ ಅವಟಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande