
ಗದಗ, 17 ಜೂನ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳಿಗೆ ಸಂಬಂಧಿಸಿದ ಕೃಷಿ ಅಂಕಿ-ಅಂಶಗಳು ಹಾಗೂ ಬೆಳೆ ವಿಸ್ತೀರ್ಣದ ಮಾಹಿತಿ ಅತ್ಯಂತ ನಿಖರವಾಗಿರಬೇಕು. ಇದಕ್ಕಾಗಿ ಕಂದಾಯ ಸೇರಿದಂತೆ ಎಲ್ಲಾ ಸಂಬಂಧಿತ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜರುಗಿದ ಕೃಷಿ ಅಂಕಿ ಅಂಶಗಳ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಂಗಾಮು ಆರಂಭದಿಂದ ಕೊನೆಯವರೆಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಅಂಕಿ-ಅಂಶಗಳಲ್ಲಿ ಡೇಟಾ ಹೊಂದಾಣಿಕೆಯಲ್ಲಿ ಯಾವುದೇ ಗೊಂದಲಗಳಿರಬಾರದು. ಇಲಾಖೆಗಳು ಪರಸ್ಪರ ಕುಳಿತು ಮಾಹಿತಿಗಳನ್ನು ತಾಳೆ ನೋಡಬೇಕು ಹಾಗೆ ಕ್ಷೇತ್ರ ಮಟ್ಟದ ಬೆಳೆ ಸಮೀಕ್ಷೆ ನಿಖರವಾಗಿರಬೇಕು. ಖಾಸಗಿ ಜಂಟಿ ಸಮೀಕ್ಷೆದಾರರು ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ನೀಡುವ ಬೆಳೆ ಸಮೀಕ್ಷೆಯ ಮಾಹಿತಿಯನ್ನು ಮೇಲ್ವಿಚಾರಕರು ಕಡ್ಡಾಯವಾಗಿ ಕ್ಷೇತ್ರ ಮಟ್ಟದಲ್ಲಿ ಪರಿಶೀಲಿಸಬೇಕು. ಇದು ಮೇಲ್ವಿಚಾರಕರ ಜವಾಬ್ದಾರಿ ಎಂದು ಸೂಚಿಸಿದರು.
ಕ್ರಾಪ್ ಕಟಿಂಗ್ ಪ್ರಯೋಗಗಳು ಮತ್ತು ಬೆಳೆ ಸಮೀಕ್ಷೆಗಳಲ್ಲಿ ತಪ್ಪು ಮಾಹಿತಿಗಳು ದಾಖಲಾದರೆ, ರೈತರಿಗೆ ಬೆಳೆ ವಿಮೆ ಪಡೆಯುವಾಗ ತೊಂದರೆಯಾಗುತ್ತದೆ. ರೈತರಿಗೆ ಅನ್ಯಾಯವಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ತಪ್ಪು ಮಾಹಿತಿಯಿಂದಾಗಿ ವಿಮಾ ಕಂಪನಿಗಳು ಆಕ್ಷೇಪಣೆ ಎತ್ತಲು ಅಧಿಕಾರಿಗಳೇ ಕಾರಣರಾಗಬಾರದು ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಜೋಳದಂತಹ ಸಾಂಪ್ರದಾಯಿಕ ಬೆಳೆಗಳ ವಿಸ್ತೀರ್ಣ ಕಡಿಮೆಯಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ರೈತರಿಗೆ ಆರ್ಥಿಕವಾಗಿ ಹೆಚ್ಚಿನ ಲಾಭ ತಂದುಕೊಡುವ ಬೆಳೆಗಳ ಬಗ್ಗೆ ಬೆಳೆ ವೈವಿಧ್ಯತೆ ಹಾಗೂ ಪಾಳು ಭೂಮಿ ಬಳಕೆಯ ಮಾಹಿತಿ ನೀಡಬೇಕು ಎಂದರು.
ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಉತ್ತಮ ಅವಕಾಶಗಳಿದ್ದು, ರೈತರಿಗೆ ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಬೇಕು. ಜಿಲ್ಲೆಯ ಪಾಳು ಭೂಮಿಯನ್ನು ಗುರುತಿಸಿ, ಅದನ್ನು ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಿ ಸಮರ್ಪಕವಾಗಿ ಬಳಸಿಕೊಳ್ಳಲು ರೈತರಲ್ಲಿ ಜಾಗೃತಿ ಮೂಡಿಸುವಂತೆ ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಿತ್ತನೆ ಕಾರ್ಯ ಮುಗಿದ ತಕ್ಷಣವೇ ಪೋರ್ಟಲ್ನಲ್ಲಿ ನಿಖರವಾದ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು. ಯಾವುದೇ ಹಂತದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು, ಕೃಷಿ ವಲಯದ ಪ್ರಗತಿ ಹಾಗೂ ನಿಖರವಾದ ಅಂಕಿ-ಅಂಶಗಳ ಸಂಗ್ರಹಣೆಯು ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸಲು ಅತ್ಯಂತ ಪ್ರಮುಖವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ ತಿಳಿಸಿದರು.
ಬೆಳೆ ವಿಮೆ ಹಾಗೂ ಪರಿಹಾರ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ತಡೆಯಲು ಜಿಪಿಎಸ್ ಆಧಾರಿತ ನಿಖರ ಅಂಕಿ-ಅಂಶಗಳ ಸಂಗ್ರಹಣೆ ಮತ್ತು ನಿಖರ ಬೆಳೆ ಸಮೀಕ್ಷೆ ನಡೆಸಬೇಕು. ಕೃಷಿ ಮತ್ತು ಸಾಂಖ್ಯಿಕ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ, ನಿಗದಿತ ಅವಧಿಯೊಳಗೆ ಬೆಳೆ ಕಟಾವು ಪ್ರಯೋಗಗಳನ್ನು ಯಶಸ್ವಿಗೊಳಿಸಬೇಕು. ಜಿಲ್ಲೆಯಲ್ಲಿ ರೈತರ ಸಂಖ್ಯೆ ಹಾಗೂ ಭೂಹಿಡುವಳಿ ವಿಸ್ತೀರ್ಣಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ನಿರಂತರವಾಗಿ ರೈತರ ಮಾಹಿತಿ ನವೀಕರಿಸಲು ಅಧಿಕಾರಿಗಳು ಕ್ಷೇತ್ರ ಮಟ್ಟದಲ್ಲಿ ಭೇಟಿ ನೀಡಿ ವಾಸ್ತವಿಕ ವರದಿಯನ್ನು ಸಿದ್ಧಪಡಿಸಬೇಕು. ತಪ್ಪು ಮಾಹಿತಿಯಿಂದ ಯಾವುದೇ ಅರ್ಹ ರೈತರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಬಾರದು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಸಾಂಖ್ಯಿಕ ಸಂಗ್ರಹಣಾ ಅಧಿಕಾರಿಗಳಾದ ಬಿ.ಎಸ್. ಪಾಟೀಲ ಅವರು ಜಿಲ್ಲೆಯ ಕೃಷಿ ಅಂಕಿ-ಅಂಶಗಳ ಪ್ರಗತಿ ಹಾಗೂ ಪ್ರಸಕ್ತ ಸಾಲಿನ ಗುರಿಗಳ ಕುರಿತು ಸಭೆಗೆ ಸಮಗ್ರ ಮಾಹಿತಿ ನೀಡಿದರು.
ಗದಗ ಜಿಲ್ಲೆಯ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಸಮನ್ವಯದೊಂದಿಗೆ ಕಳೆದ ಮೂರು ವರ್ಷಗಳ (2023-24 ರಿಂದ 2025-26) ಋತುಮಾನವಾರು ಒಟ್ಟು ಮತ್ತು ನೀರಾವರಿ ಬೆಳೆ ಕ್ಷೇತ್ರಗಳ ಹಾಗೂ ಪ್ರಮುಖ ಬೆಳೆಗಳ ವಿಸ್ತೀರ್ಣದ ಅಧಿಕೃತ ಅಂಕಿ-ಅಂಶಗಳ ವರದಿಯನ್ನು ಬಿಡುಗಡೆ ಮಾಡಲಾಗಿದೆ.
ಗದಗ ಜಿಲ್ಲೆಯ ಋತುವಾರು ಮೂರು ವರ್ಷಗಳ ಬೆಳೆ ಒಟ್ಟು ಕ್ಷೇತ್ರ ಮತ್ತು ನೀರಾವರಿ ಕ್ಷೇತ್ರಗಳ ವಿವರ (ಹೆಕ್ಟೇರ್ಗಳಲ್ಲಿ):
ಜಿಲ್ಲೆಯ ಒಟ್ಟು ಬಿತ್ತನೆ ಕ್ಷೇತ್ರವು 2024-25ರಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದ್ದು, 2025-26ರಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.
ಒಟ್ಟು ಕ್ಷೇತ್ರವು (2025-26): ಮುಂಗಾರು ಹಂಗಾಮಿನಲ್ಲಿ 3,41,579 ಹೆಕ್ಟೇರ್, ಹಿಂಗಾರು ಹಂಗಾಮಿನಲ್ಲಿ 2,44,198 ಹೆಕ್ಟೇರ್ ಸೇರಿ ಒಟ್ಟು 5,85,777 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ನೀರಾವರಿ ಕ್ಷೇತ್ರ (2025-26): ಪ್ರಸಕ್ತ ಸಾಲಿನಲ್ಲಿ ಮುಂಗಾರಿನಲ್ಲಿ 60,442 ಹೆಕ್ಟೇರ್ ಹಾಗೂ ಹಿಂಗಾರಿನಲ್ಲಿ 57,749 ಹೆಕ್ಟೇರ್ ಸೇರಿದಂತೆ ಒಟ್ಟು 1,18,191 ಹೆಕ್ಟೇರ್ ಪ್ರದೇಶ ನೀರಾವರಿ ಸೌಲಭ್ಯ ಒಳಗೊಂಡಿದೆ.
ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳ ವಿವರ (2025-26):
ಜಿಲ್ಲೆಯ ಮುಂಗಾರು ಹಂಗಾಮಿನಲ್ಲಿ ಋತುವಿನ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಬೆಳೆಗಳ ಕ್ಷೇತ್ರವಾರು ವಿವರ ಹೀಗಿದ್ದು, ಕೃಷಿ ಬೆಳೆಗಳಾದ ಮೆಕ್ಕೆಜೋಳವು ಮುಂಚೂಣಿಯಲ್ಲಿದ್ದು 1,54,216 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಹೆಸರು 1,06,145 ಹೆಕ್ಟೇರ್, ಶೇಂಗಾ 10,322 ಹೆಕ್ಟೇರ್, ಹತ್ತಿ 6,664 ಹೆಕ್ಟೇರ್ ಹಾಗೂ ಸೂರ್ಯಕಾಂತಿ 3,278 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಹಿಂಗಾರು ಹಂಗಾಮಿನ ಪ್ರಮುಖ ಬೆಳೆಗಳ ವಿವರ (2025-26):
ಜಿಲ್ಲೆಯ ಹಿಂಗಾರು ಹಂಗಾಮಿನಲ್ಲಿ ಋತುವಿನ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಬೆಳೆಗಳ ಕ್ಷೇತ್ರವಾರು ವಿವರ ಹೀಗಿದ್ದು, ಹಿಂಗಾರು ಹಂಗಾಮಿನಲ್ಲಿ ಕಡಲೆ ಮತ್ತು ಗೋಧಿ ಪ್ರಮುಖ ಕೃಷಿ ಬೆಳೆಗಳಾಗಿ ಹೊರಹೊಮ್ಮಿವೆ.
ಕೃಷಿ ಬೆಳೆಗಳಾದ ಕಡಲೆ ಬರೋಬ್ಬರಿ 1,57,903 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ಮೂಲಕ ಅತಿ ದೊಡ್ಡ ಬೆಳೆಯಾಗಿದೆ. ಜೋಳ 22,172 ಹೆಕ್ಟೇರ್, ಗೋಧಿ 19,500 ಹೆಕ್ಟೇರ್, ಸೂರ್ಯಕಾಂತಿ 14,755 ಹೆಕ್ಟೇರ್ ಹಾಗೂ ಮೆಕ್ಕೆಜೋಳ 3,287 ಹೆಕ್ಟೇರ್ ಪ್ರದೇಶದಲ್ಲಿ ದಾಖಲಾಗಿದೆ.
ಸಭೆಯಲ್ಲಿ ಕೃಷಿ ಇಲಾಖೆಯ ವಿವಿಧ ಯೋಜನೆಗಳು, ಬೆಳೆ ಸಮೀಕ್ಷೆ, ಬೆಳೆ ಕಟಾವು ಪ್ರಯೋಗಗಳು ಹಾಗೂ ರೈತರ ಭೂಹಿಡುವಳಿ ಮಾಹಿತಿ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ. ಆರ್, ನಗರಾಭಿರುದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರು, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ, ಭೂ ದಾಖಲೆ ಇಲಾಖೆಯ ಉಪನಿರ್ದೇಶಕ ರುದ್ರಣ್ಣಗೌಡ ಜಿ. ಜೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP