
ಬೆಂಗಳೂರು, 17 ಜೂನ್ (ಹಿ.ಸ.) :
ಆ್ಯಂಕರ್ : ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಕೃಷ್ಣ ಬೈರೇಗೌಡ ಅವರಿಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಶುಭಾಶಯ ಕೋರಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಅವರು, ಸಚಿವರ ಮುಂದೆ ಹಲವು ಸವಾಲುಗಳಿದ್ದು, ಬೆಂಗಳೂರಿನ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಸಚಿವರು ಅಧಿಕಾರ ವಹಿಸಿಕೊಳ್ಳಲು 12 ದಿನಗಳ ಕಾಲ ಕಾಯಬೇಕಾದ ಪರಿಸ್ಥಿತಿ ಎದುರಾಗಿದ್ದು, ಇದು ಬೆಂಗಳೂರಿನ ಸಿಲ್ಕ್ ಬೋರ್ಡ್ ಸಂಚಾರ ದಟ್ಟಣೆಯನ್ನು ನೆನಪಿಸುವಂತಿದೆ ಎಂದು ನಿಖಿಲ್ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ನಗರಾಭಿವೃದ್ಧಿ ಖಾತೆಯ ಹೆಸರಿದ್ದರೂ, ನಗರ ಯೋಜನೆಗೆ ಸಂಬಂಧಿಸಿದ ಪ್ರಮುಖ ಸಂಸ್ಥೆಗಳಾದ ಬಿಡಿಎ ಮತ್ತು ಬಿಎಂಆರ್ಡಿಎ ಮುಖ್ಯಮಂತ್ರಿಗಳ ಬಳಿಯೇ ಇರುವುದನ್ನು ಉಲ್ಲೇಖಿಸಿದ ಅವರು, “ಬ್ಲೂಪ್ರಿಂಟ್ ಇಲ್ಲದೆ ನಗರವನ್ನು ಅಭಿವೃದ್ಧಿಪಡಿಸುವುದು ದೊಡ್ಡ ಸವಾಲು” ಎಂದು ಹೇಳಿದ್ದಾರೆ.
ಆದಾಗ್ಯೂ, ಕಂದಾಯ ಸಚಿವರಾಗಿದ್ದ ವೇಳೆ ಕೃಷ್ಣ ಬೈರೇಗೌಡ ಅವರು ತಂತ್ರಜ್ಞಾನ ಬಳಸಿ ಆಡಳಿತದಲ್ಲಿ ವ್ಯವಸ್ಥಿತ ಸುಧಾರಣೆಗಳನ್ನು ತಂದಿದ್ದನ್ನು ಸ್ಮರಿಸಿರುವ ನಿಖಿಲ್, ಸಂಕೀರ್ಣ ವ್ಯವಸ್ಥೆಗಳನ್ನು ಸರಿಪಡಿಸುವ ಸಾಮರ್ಥ್ಯ ಅವರಿಗೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಬೆಂಗಳೂರಿನ ಪ್ರಮುಖ ಸಮಸ್ಯೆಗಳಾದ ಕಸ ನಿರ್ವಹಣೆ, ಒಳಚರಂಡಿ ವ್ಯವಸ್ಥೆ ಹಾಗೂ ರಾಜಕಾಲುವೆಗಳ ನಿರ್ವಹಣೆಯತ್ತ ಸಚಿವರು ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಅವರು ಹೇಳಿದ್ದಾರೆ. ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಜನರಿಗೆ ಸದ್ಯ ಭವ್ಯ ಸ್ಕೈವಾಕ್ಗಳಿಗಿಂತ ಮಳೆನೀರು ಸರಾಗವಾಗಿ ಹರಿದುಹೋಗುವ ಚರಂಡಿಗಳು, ಉಕ್ಕಿ ಹರಿಯದ ಒಳಚರಂಡಿ ವ್ಯವಸ್ಥೆ ಹಾಗೂ ಸ್ವಚ್ಛ ರಸ್ತೆಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
“ಈ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಟ್ಟರೆ ಬೆಂಗಳೂರಿಗರು ನೆಮ್ಮದಿಯ ಜೀವನ ನಡೆಸಬಹುದು. ಹೊಣೆಗಾರಿಕೆ ನಿಮ್ಮದು, ಬದಲಾವಣೆಯ ನಿರೀಕ್ಷೆಯಲ್ಲಿ ನಾವಿದ್ದೇವೆ” ಎಂದು ನಿಖಿಲ್ ಕುಮಾರಸ್ವಾಮಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.