
ಬಾಗಲಕೋಟೆ, 17 ಜೂನ್ (ಹಿ.ಸ.) :
ಆಂಕರ್ : ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ (BTDA) ಕಚೇರಿಯ ಕಾರ್ಯವೈಖರಿ ಕುರಿತು ಸಾರ್ವಜನಿಕ ವಲಯದಲ್ಲಿ ಅಸಮಾಧಾನದ ಧ್ವನಿಗಳು ಕೇಳಿ ಬರುತ್ತಿವೆ. ನಿವೇಶನಕ್ಕಾಗಿ ವರ್ಷಗಳಿಂದ ಕಚೇರಿಯ ಬಾಗಿಲು ತಟ್ಟುತ್ತಿರುವ ಬಡ ಹಾಗೂ ಸಂತ್ರಸ್ತ ಕುಟುಂಬಗಳ ಅಳಲು ಅಧಿಕಾರಿಗಳ ಗಮನಕ್ಕೆ ಬರುತ್ತಿಲ್ಲ ಎಂಬ ಆರೋಪಗಳು ವ್ಯಕ್ತವಾಗಿವೆ.
ತಮ್ಮ ನೌಕರನ ಮೇಲೆ ರೈತನೊಬ್ಬ ಹಲ್ಲೆ ನಡೆಸಿದ ಪ್ರಕರಣದ ಹಿನ್ನೆಲೆಯಲ್ಲಿ ಬಿಟಿಡಿಎ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ ವೇಳೆ, ತಮ್ಮ ಹಕ್ಕಿಗಾಗಿ ಹೋರಾಡುತ್ತಿರುವ ಸಾಮಾನ್ಯ ಜನರ ಸಮಸ್ಯೆಗಳು ಕಡೆಗಣಿಸಲ್ಪಟ್ಟಿವೆ ಎಂಬ ಟೀಕೆಗಳು ಕೇಳಿ ಬಂದಿವೆ. ಪ್ರತಿಭಟನೆ ಬಳಿಕ ಸಿಬ್ಬಂದಿಗಳು ಉಪಹಾರ ಸೇವಿಸಲು ತೆರಳಿದರೆ, ಅದೇ ಸ್ಥಳದಲ್ಲಿ ತಮ್ಮ ಬೇಡಿಕೆಗಳಿಗಾಗಿ ಕಾಯುತ್ತಿದ್ದ ಮಹಿಳೆಯರ ನೋವು ಮಾತ್ರ ಯಾರ ಗಮನಕ್ಕೂ ಬಂದಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ದಶಕಗಳಿಂದ ನಿವೇಶನಕ್ಕಾಗಿ ಕಚೇರಿಗೆ ಅಲೆದಾಡುತ್ತಿರುವ ಮೂವರು ಮಹಿಳೆಯರು ತಮ್ಮ ಅಳಲು ತೋಡಿಕೊಂಡಿದ್ದು, ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದ್ದರೂ ಸ್ಪಂದನೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಟಿಡಿಎ ಅಧ್ಯಕ್ಷ ಪ್ರಕಾಶ್ ತಪಶೆಟ್ಟಿ ಅವರು ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಜನಪರ ಆಡಳಿತದ ಭರವಸೆ ನೀಡಿದ್ದರು. ಆದರೆ, ಪ್ರಸ್ತುತ ಎದುರಾಗಿರುವ ಆರೋಪಗಳು ಆಡಳಿತದ ಪಾರದರ್ಶಕತೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಸಂತ್ರಸ್ತರಿಗೆ ಮೀಸಲಾದ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳೂ ಕೇಳಿಬರುತ್ತಿದ್ದು, ನಿಜವಾದ ಅರ್ಹ ಫಲಾನುಭವಿಗಳಿಗೆ ನ್ಯಾಯ ದೊರೆಯಬೇಕೆಂಬ ಆಗ್ರಹ ಹೆಚ್ಚಾಗಿದೆ.
ನಿವೇಶನ ಹಂಚಿಕೆ ಪ್ರಕ್ರಿಯೆ, ಅರ್ಹತೆ ಪರಿಶೀಲನೆ ಹಾಗೂ ಆಡಳಿತಾತ್ಮಕ ಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿದ್ದರೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಬಡವರು ಮತ್ತು ಸಂತ್ರಸ್ತರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡುವ ಮೂಲಕ ಬಿಟಿಡಿಎ ತನ್ನ ಮೇಲಿನ ವಿಶ್ವಾಸವನ್ನು ಉಳಿಸಿಕೊಳ್ಳಬೇಕಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande