
ಕೋಲಾರ, ೧೭ ಜೂನ್ (ಹಿ.ಸ) :
ಆಂಕರ್ : ಕೋಲಾರದ ಎಸ್.ಎನ್.ಆರ್ ವೃತ್ತ ನಗರದ ಒಂದು ಪ್ರಮುಖ ವೃತ್ತವಾಗಿದ್ದು,ಈ ವೃತ್ತದಲ್ಲಿ ಎಸ್.ಎನ್.ಆರ್.ಆಸ್ಪತ್ರೆ, ಮಹಿಳಾ ಸಮಾಜ ಶಾಲೆಮತ್ತು ಪ್ರವಾಸಿ ಮಂದಿರಗಳಿವೆ ಮತ್ತು ಚಿನ್ಮಯಾ ಶಾಲೆ, ಸಾಯಿ ಬಾಬಾ ಮಂದಿರ ಮತ್ತು ಕೋಲಾರ ರೈಲ್ವೇ ನಿಲ್ದಾಣಕ್ಕೂ ಈ ವೃತ್ತದ ಮುಖಾಂತರವೇ ಹಾದು ಹೋಗಬೇಕು. ಹಾಗಾಗಿ ಈ ವೃತ್ತ ಹೆಚ್ಚು ಜನ ಮತ್ತು ವಾಹನ ಸಂಚಾರವಿರುವ ವೃತ್ತವಾಗಿದೆ ಎಂದು ನಿವೃತ್ತ ಎ.ಎಸ್.ಐ. ರವೀಂದ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಶಾಲಾ ಮಕ್ಕಳು ಹಾಗೂ ಅವರ ಪೋಷಕರು, ಹಿರಿಯ ನಾಗರಿಕರು ಶಾಲಾ ಸಿಬ್ಬಂದಿ ವರ್ಗ ಮತ್ತು ಆಸ್ಪತ್ರೆ, ಚಿಕಿತ್ಸಾಲಯಗಳಿಗೆ ಬರುವಂತಹ ರೋಗಿಗಳು ಮತ್ತು ಸಾಹಿಬಾಬಾ ಮಂದಿರ, ರೈಲ್ವೆ ನಿಲ್ದಾಣಕ್ಕೆ ಹೋಗುವವರು ಈ ವೃತ್ತದಲ್ಲಿ ಡೂಂ ಲೈಟ್ ವೃತ್ತದ ಕಡೆಯಿಂದ ಅತ್ಯಂತ ವೇಗವಾಗಿ ಬರುವ ವಾಹನಗಳಿಂದ ತಪ್ಪಿಸಿಕೊಂಡು ಸಂಚರಿಸುವುದು ತುಂಬಾ ದುಸ್ತರ ಹಾಗೂ ಅಪಾಯಕಾರಿಯಾಗಿದ್ದು ಜೀವವನ್ನು ಕೈಯಲ್ಲಿ ಹಿಡಿದು ಕೊಂಡು ಕಷ್ಟ ಪಟ್ಟು ವೃತ್ತವ ದಾಟುವಂತಾಗಿದೆ ಎಂದು ತಿಳಿಸಿದ್ದಾರೆ.
ಆಸ್ಪತ್ರೆಗೆ ಬರುವ ರೋಗಿಗಳು, ಶಾಲಾ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರಿಗಾಗುತ್ತಿರುವ ತೊಂದರೆ ಮನಗಂಡು ಈ ಸಮಸ್ಯೆ ಬಗೆಹರಿಸಲು ಈ ವೃತ್ತದ ಹತ್ತಿರ ವಾಹನಗಳ ವೇಗ ನಿಯಂತ್ರಣಕ್ಕೆ ವೇಗ ನಿಯಂತ್ರಕ ಉಬ್ಬುಗಳ ಹಾಕಲು ಈ ತಕ್ಷಣವೇ ಕ್ರಮ ಕೈಗೊಂಡು ಎಲ್ಲರ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಕನ್ನಡ ಪರ ಸಂಘಟನೆಗಳು, ಹಿರಿಯ ನಾಗರಿಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಸಮಸ್ಯೆ ಬಗೆಹರಿಸಲು ಕೋರಿ ಕೋಲಾರ ನಗರ ಸಂಚಾರ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರಿಗೆ ಮತ್ತು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ಹಿರಿಯ ನಾಗರಿಕರಾದ ಚುಟುಕು ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಪಿ.ನಾರಾಯಣಪ್ಪ, ಗೌರಿಪೇಟೆಯ ನಿವೃತ್ತ ಸಹಾಯಕ ಆರಕ್ಷಕ ನಿರೀಕ್ಷಕ ಕೆ.ಎನ್ ರವೀಂದ್ರನಾಥ್ ಮತ್ತು ಕುರುಬರ ಪೇಟೆಯ ಬೆಮೆಲ್ ಶ್ರೀನಿವಾಸ್ ಹಾಗೂ ನಿವೃತ್ತ ಆರಕ್ಷಕ ಉಪ ನಿರೀಕ್ಷಕÀ ಗೌರೀಪೇಟೆಯ ನಾರಾಯಣ್ ಹಾಗೂ ಕುಬರಪೇಟೆಯ ಶಂಕರನಾರಾಯಣಪ್ಪ ಮತ್ತು ಶ್ರೀ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಕೆ.ಆರ್.ತ್ಯಾಗರಾಜ್ ಮನವಿ ಪತ್ರ ಸಲ್ಲಿಸಿ ಸಮಸ್ಯೆ ಪರಿಹರಿಸಲು ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್