ಬೆಂಕಿ ಅವಘಡದಲ್ಲಿ ಮನೆ ಕಳೆದುಕೊಂಡ ರೈತನಿಗೆ ಹೊಸ ಸೂರು : ಪ್ರಗತಿ ಸಂಘದ ಹಿರಿಯ ಸದಸ್ಯರಿಂದ ಮಾನವೀಯ ನೆರವು
ವಿಜಯಪುರ, 17 ಜೂನ್ (ಹಿ.ಸ.) : ಆಂಕರ್ : ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯೆಂಬಂತೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಓತಿಹಾಳ ಗ್ರಾಮದಲ್ಲಿ ಅಪರೂಪದ ಸೇವಾ ಕಾರ್ಯವೊಂದು ನಡೆದಿದೆ. ಬೆಂಕಿ ಅವಘಡದಲ್ಲಿ ಸಂಪೂರ್ಣ ಮನೆ ಕಳೆದುಕೊಂಡ ರೈತ ಕುಟುಂಬಕ್ಕೆ ಪ್ರಗತಿ ಸಂಘದ ಹಿರಿಯ ಸದಸ್ಯರೊ
ಅನುಕಂಪ


ವಿಜಯಪುರ, 17 ಜೂನ್ (ಹಿ.ಸ.) :

ಆಂಕರ್ : ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯೆಂಬಂತೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಓತಿಹಾಳ ಗ್ರಾಮದಲ್ಲಿ ಅಪರೂಪದ ಸೇವಾ ಕಾರ್ಯವೊಂದು ನಡೆದಿದೆ.

ಬೆಂಕಿ ಅವಘಡದಲ್ಲಿ ಸಂಪೂರ್ಣ ಮನೆ ಕಳೆದುಕೊಂಡ ರೈತ ಕುಟುಂಬಕ್ಕೆ ಪ್ರಗತಿ ಸಂಘದ ಹಿರಿಯ ಸದಸ್ಯರೊಬ್ಬರು ತಮ್ಮ ಸ್ವಂತ ವೆಚ್ಚದಲ್ಲಿ ನೂತನ ಪತ್ರಾಸ್ ಮನೆ ನಿರ್ಮಿಸಿ ಆಶ್ರಯ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಓತಿಹಾಳ ಗ್ರಾಮದ ರೈತ ಚನ್ನಬಸಪ್ಪ ಬಿರಾದಾರ ಅವರ ಮನೆ ಇತ್ತೀಚೆಗೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಸಂಪೂರ್ಣ ಸುಟ್ಟು ಭಸ್ಮವಾಗಿತ್ತು. ಮನೆಯಲ್ಲಿದ್ದ ವಸ್ತುಗಳು ನಾಶವಾಗಿದ್ದು, ಕುಟುಂಬ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿತ್ತು. ಈ ವಿಷಯ ತಿಳಿದ ಪ್ರಗತಿ ಸಂಘದ ಹಿರಿಯ ಸದಸ್ಯರು ಕುಟುಂಬದ ನೆರವಿಗೆ ಧಾವಿಸಿ, ಹೊಸ ಮನೆ ನಿರ್ಮಿಸುವ ಜವಾಬ್ದಾರಿ ಹೊತ್ತುಕೊಂಡರು.

ಸುಮಾರು ₹12 ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದರಿಂದ ಕುಟುಂಬಕ್ಕೆ ದೊಡ್ಡ ಆಘಾತ ಎದುರಾಗಿತ್ತು. ಆದರೆ ಸಂಘದ ಸದಸ್ಯರ ಸಹಕಾರದಿಂದ ನೂತನ ಪತ್ರಾಸ್ ಮನೆ ನಿರ್ಮಿಸುವುದರ ಜೊತೆಗೆ ಅಗತ್ಯ ಗೃಹೋಪಯೋಗಿ ವಸ್ತುಗಳು, ಅಡುಗೆ ಪರಿಕರಗಳು, ಹಾಸಿಗೆ ಹಾಗೂ ಆಹಾರ ಸಾಮಗ್ರಿಗಳನ್ನು ಒದಗಿಸಿ ಕುಟುಂಬಕ್ಕೆ ಹೊಸ ಬದುಕಿನ ಭರವಸೆ ನೀಡಲಾಗಿದೆ.

ನೂತನ ಮನೆಯ ವಾಸ್ತುಶಾಂತಿ ಕಾರ್ಯಕ್ರಮದಲ್ಲಿ ಕನ್ನೊಳ್ಳಿ ಹಿರೇಮಠದ ಪೂಜ್ಯ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಭಾಗವಹಿಸಿ ಸಸಿಗೆ ನೀರುಣಿಸಿ, ಚನ್ನಬಸಪ್ಪ ಬಿರಾದಾರ ದಂಪತಿಗಳಿಗೆ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪೂಜ್ಯ ಶ್ರೀ ಸಿದ್ಧಲಿಂಗ ಶಿವಾಚಾರ್ಯರು, “ಸಮಾಜದಲ್ಲಿ ಪ್ರೀತಿ, ಕರುಣೆ, ಸಹಾನುಭೂತಿ ಮತ್ತು ಸೌಜನ್ಯದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುವುದೇ ನಿಜವಾದ ಮಾನವೀಯತೆಯ ಲಕ್ಷಣ” ಎಂದು ಹೇಳಿದರು.

ಪ್ರಗತಿ ಸಂಘದ ಸಲಹಾ ಕಾರ್ಯದರ್ಶಿ ಕಿರಣಕುಮಾರ ನಾಟಿಕಾರ ಮಾತನಾಡಿ, “ಜಾತಿ-ಧರ್ಮದ ಭೇದವಿಲ್ಲದೆ ಮಾನವೀಯ ಮೌಲ್ಯಗಳನ್ನು ಉಳಿಸುವ ಕಾರ್ಯಗಳು ಸಮಾಜಕ್ಕೆ ಮಾದರಿಯಾಗುತ್ತವೆ. ಇಂತಹ ಸೇವಾ ಮನೋಭಾವ ಎಲ್ಲರಲ್ಲೂ ಬೆಳೆಯಬೇಕು” ಎಂದರು.

ಎಸ್ಡಿಎಂಸಿ ಮಾಜಿ ಅಧ್ಯಕ್ಷ ಶಿವಾನಂದ ಸಾಲಿಮಠ ಮಾತನಾಡಿ, ಬೆಂಕಿ ಅವಘಡದಿಂದ ಕುಟುಂಬವು ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಸಂಕಷ್ಟಕ್ಕೆ ಒಳಗಾಗಿತ್ತು. ಆದರೆ ಸಂಘದ ಹಿರಿಯ ಸದಸ್ಯರ ನೆರವಿನಿಂದ ಅವರಿಗೆ ಹೊಸ ಮನೆ ಮಾತ್ರವಲ್ಲದೆ ಬದುಕಿಗೆ ಅಗತ್ಯವಾದ ವಸ್ತುಗಳನ್ನೂ ಒದಗಿಸಲಾಗಿದೆ ಎಂದು ತಿಳಿಸಿದರು.

ಗ್ರಾಮದ ನಾಗರಿಕರು ಈ ಮಾನವೀಯ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮನೋಭಾವ ಸಮಾಜದಲ್ಲಿ ಇನ್ನಷ್ಟು ಹೆಚ್ಚಬೇಕು ಎಂದು ಅಭಿಪ್ರಾಯಪಟ್ಟರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande