
ವಿಜಯಪುರ, 16 ಜೂನ್ (ಹಿ.ಸ.) :
ಆಂಕರ್ : ವಿಜಯಪುರ ತಾಲೂಕಿನ ಕವಲಗಿ ಗ್ರಾಮದಲ್ಲಿ ತೋಳದ ದಾಳಿಯಿಂದ ಕುರಿ ಸಾಕಾಣಿಕೆ ಮಾಡುತ್ತಿದ್ದ ರೈತನಿಗೆ ಭಾರೀ ನಷ್ಟ ಉಂಟಾಗಿದ್ದು, ನಷ್ಟಕ್ಕೊಳಗಾದ ರೈತನಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.
ಕವಲಗಿ ಗ್ರಾಮದ ಸೋಮನಿಂಗ್ ಉತಾಳಿ (ಪೂಜಾರಿ) ಅವರಿಗೆ ಸೇರಿದ ಸುಮಾರು 15 ರಿಂದ 20 ಕುರಿಮರಿಗಳ ಮೇಲೆ ತೋಳ ದಾಳಿ ನಡೆಸಿದ್ದು, ಕೆಲವು ಕುರಿಮರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಇನ್ನೂ ಕೆಲವು ಕುರಿಮರಿಗಳು ಗಂಭೀರವಾಗಿ ಗಾಯಗೊಂಡಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿವೆ ಎಂದು ತಿಳಿದು ಬಂದಿದೆ.
ಕುರಿ ಸಾಕಾಣಿಕೆಯನ್ನೇ ಅವಲಂಬಿಸಿ ಜೀವನ ನಡೆಸುತ್ತಿರುವ ರೈತನಿಗೆ ಈ ಘಟನೆ ದೊಡ್ಡ ಆರ್ಥಿಕ ಹೊಡೆತ ನೀಡಿದೆ. ಈಗಾಗಲೇ ಕೃಷಿ ಹಾಗೂ ಪಶುಸಂಗೋಪನೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ಇಂತಹ ಘಟನೆಗಳು ಮತ್ತಷ್ಟು ತೊಂದರೆ ಉಂಟು ಮಾಡುತ್ತಿವೆ ಎಂದು ರೈತ ಸಂಘದ ಮುಖಂಡರು ಹೇಳಿದ್ದಾರೆ.
ಘಟನೆ ಕುರಿತು ಸಂಬಂಧಪಟ್ಟ ಅರಣ್ಯ ಇಲಾಖೆ ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ತೋಳದ ದಾಳಿಯಿಂದ ಮೃತಪಟ್ಟ ಹಾಗೂ ಗಾಯಗೊಂಡ ಕುರಿಮರಿಗಳ ಕುರಿತು ವರದಿ ಸಿದ್ಧಪಡಿಸಿ, ಸರ್ಕಾರದ ನಿಯಮಾನುಸಾರ ರೈತನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದೆ.
ಮುಂದಿನ ದಿನಗಳಲ್ಲಿ ಇಂತಹ ಕಾಡುಪ್ರಾಣಿಗಳ ದಾಳಿಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ರೈತರ ಜಾನುವಾರುಗಳ ರಕ್ಷಣೆಗೆ ಅಧಿಕಾರಿಗಳು ಹೆಚ್ಚಿನ ಗಮನ ನೀಡಬೇಕು ಎಂದು ಸಂಘಟನೆ ಮನವಿ ಮಾಡಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande