
ಬೆಂಗಳೂರು, 16 ಜೂನ್ (ಹಿ.ಸ.) :
ಆ್ಯಂಕರ್ : ರಾಜ್ಯ ಸರ್ಕಾರದ ದೂರದೃಷ್ಟಿಯ ಕೈಗಾರಿಕಾ ನೀತಿಗಳು ಹಾಗೂ ಉದ್ಯಮ ಸ್ನೇಹಿ ಆಡಳಿತದ ಪರಿಣಾಮವಾಗಿ 2025-26ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕದ ಒಟ್ಟು ರಫ್ತು ಪ್ರಮಾಣವು ಶೇ. 9.5ರಷ್ಟು ಏರಿಕೆ ಕಂಡು ಸುಮಾರು ₹19.7 ಲಕ್ಷ ಕೋಟಿಗೆ ತಲುಪಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಣೆ ನೀಡಿರುವ ಅವರು, ರಾಜ್ಯದ ರಫ್ತು ವಲಯದಲ್ಲಿನ ಈ ಗಮನಾರ್ಹ ಬೆಳವಣಿಗೆ ಕರ್ನಾಟಕದ ಕೈಗಾರಿಕಾ ಸಾಮರ್ಥ್ಯ ಮತ್ತು ಆರ್ಥಿಕ ಪ್ರಗತಿಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕೈಗಾರಿಕಾ ಅಭಿವೃದ್ಧಿ ನೀತಿಗಳು, ಹೂಡಿಕೆದಾರ ಸ್ನೇಹಿ ವಾತಾವರಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ನೀಡುತ್ತಿರುವ ಆದ್ಯತೆಯು ರಫ್ತು ವೃದ್ಧಿಗೆ ಪ್ರಮುಖ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ರಫ್ತು ಪ್ರಮಾಣದಲ್ಲಿ ಕಂಡು ಬಂದ ಈ ಏರಿಕೆಯಿಂದ ಜಾಗತಿಕ ಮಟ್ಟದಲ್ಲಿ ಹೊಸ ಹೂಡಿಕೆಗಳು ಮತ್ತು ಉದ್ಯೋಗಾವಕಾಶಗಳಿಗೆ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಲಿದ್ದು, ಕರ್ನಾಟಕವು ದೇಶದ ಪ್ರಮುಖ ಆರ್ಥಿಕ ಶಕ್ತಿಯಾಗಿ ಮತ್ತಷ್ಟು ಬಲಗೊಳ್ಳಲಿದೆ ಎಂದು ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕವು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಉತ್ಪಾದನಾ ವಲಯ, ಏರೋಸ್ಪೇಸ್ ಹಾಗೂ ಇತರ ಪ್ರಮುಖ ಕೈಗಾರಿಕಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ರಫ್ತು ವೃದ್ಧಿಯ ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.