
ವಿಜಯಪುರ, 16 ಜೂನ್ (ಹಿ.ಸ.) :
ಆಂಕರ್ : ಬಡತನ, ದುಡಿಮೆ, ದೂರದ ಪ್ರಯಾಣ ಯಾವುದೂ ಅಡ್ಡಿಯಾಗಲಿಲ್ಲ. ತಮ್ಮ ಊರಿನ ಪ್ರತಿಭಾವಂತ ಮಗಳು ಅಂತಾರಾಷ್ಟ್ರೀಯ ಮಟ್ಟದ ಕನಸು ಹೊತ್ತು ಕ್ರಿಕೆಟ್ ಮೈದಾನದಲ್ಲಿ ನಾಯಕಿಯಾಗಿ ಕಣಕ್ಕಿಳಿದ ಕ್ಷಣವನ್ನು ಕಣ್ತುಂಬಿಕೊಳ್ಳಲು ವಿಜಯಪುರ ಜಿಲ್ಲೆಯ ಸಿಂದಗಿಯ ಜನರು ಬೆಂಗಳೂರಿನತ್ತ ಸಾಗಿದರು.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಜಯಶ್ರೀ ರಾಜಶೇಖರ್ ಕುಚುಬಾಳ ಅವರು ವಿಶ್ವವಿದ್ಯಾಲಯ ಕ್ರಿಕೆಟ್ ತಂಡದ ನಾಯಕಿಯಾಗಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಇದೇ ಸಂದರ್ಭದಲ್ಲಿ 23 ವರ್ಷ ವಯೋಮಾನದ ಯುವತಿಯರ ಕರ್ನಾಟಕ ಕ್ರಿಕೆಟ್ ತಂಡದ ನಾಯಕಿಯಾಗಿ ಆಯ್ಕೆಯಾಗಿರುವುದು ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಜಯಶ್ರೀಯವರ ಈ ಸಾಧನೆಯನ್ನು ಸಂಭ್ರಮಿಸಲು ಅವರ ಹುಟ್ಟೂರು ಸಿಂದಗಿಯಿಂದ ಸುಮಾರು 200ಕ್ಕೂ ಹೆಚ್ಚು ಅಭಿಮಾನಿಗಳು ಬೆಂಗಳೂರಿಗೆ ತೆರಳಿದ್ದರು. ಮಹಿಳೆಯರು, ಮಕ್ಕಳು, ರೈತರು, ಕೂಲಿ ಕಾರ್ಮಿಕರು ಸೇರಿದಂತೆ ವಿವಿಧ ವರ್ಗದ ಜನರು ತಮ್ಮ ನೆಚ್ಚಿನ ಆಟಗಾರ್ತಿಗೆ ಬೆಂಬಲ ನೀಡಲು ಒಂದಾಗಿ ಪ್ರಯಾಣ ಬೆಳೆಸಿದರು.
ಆರ್ಥಿಕವಾಗಿ ಸಾಮಾನ್ಯ ಸ್ಥಿತಿಯಲ್ಲಿರುವ ಈ ಅಭಿಮಾನಿಗಳು ಹೋಟೆಲ್ ಊಟದ ಅವಲಂಬನೆ ಮಾಡದೆ, ಮನೆಯಲ್ಲೇ ತಯಾರಿಸಿದ ಉಂಡಿ, ಚಕ್ಕಲಿ, ಕರ್ಚಿಕಾಯಿ, ರೊಟ್ಟಿ ಸೇರಿದಂತೆ ಬುತ್ತಿ ಕಟ್ಟಿಕೊಂಡು ಬೆಂಗಳೂರಿನತ್ತ ಹೊರಟಿದ್ದರು. ಬಾಡಿಗೆ ವಾಹನಗಳಲ್ಲಿ ಪ್ರಯಾಣಿಸಿ, ಮೈದಾನದಲ್ಲಿ ಜಯಶ್ರೀಯವರ ಆಟವನ್ನು ವೀಕ್ಷಿಸಿದ ಕ್ಷಣ ಅವರಿಗೆ ದೊಡ್ಡ ಹಬ್ಬದ ಸಂಭ್ರಮವನ್ನು ತಂದಿತು.
ತಮ್ಮ ಊರಿನ ಮಗಳು ರಾಜ್ಯ ತಂಡದ ನಾಯಕತ್ವ ವಹಿಸಿರುವುದು ಸಿಂದಗಿ ಜನರ ಹೆಮ್ಮೆಗೆ ಕಾರಣವಾಗಿದ್ದು, ಜಯಶ್ರೀಯವರ ಸಾಧನೆ ಗ್ರಾಮೀಣ ಭಾಗದ ಯುವತಿಯರಿಗೆ ಕ್ರೀಡೆಯಲ್ಲಿ ಮುನ್ನಡೆಯಲು ಪ್ರೇರಣೆಯಾಗಿದೆ.
ಬೆಂಗಳೂರಿನ ಕ್ರಿಕೆಟ್ ಮೈದಾನದಲ್ಲಿ ಜಯಶ್ರೀ ಬ್ಯಾಟ್ ಹಿಡಿದು ಕಣಕ್ಕಿಳಿದಾಗ ಸಿಂದಗಿಯಿಂದ ತೆರಳಿದ್ದ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ತಮ್ಮ ಮಗಳ ಸಾಧನೆಯನ್ನು ಕಣ್ಣಾರೆ ಕಂಡು ಸಂಭ್ರಮಿಸಿದ ಅಭಿಮಾನಿಗಳ ಪಾಲಿಗೆ ಈ ದಿನ ಮರೆಯಲಾಗದ ನೆನಪಾಗಿ ಉಳಿಯಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande