
ಬಾಗಲಕೋಟೆ, 16 ಜೂನ್ (ಹಿ.ಸ.) :
ಆಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್) ಕುರಿತು ಕರ್ನಾಟಕ ಸರ್ಕಾರದ ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಆರ್.ಎಸ್.ಎಸ್ ಸರಸಂಘ ಚಾಲಕರಾದ ಮೋಹನ್ ಭಾಗವತ್ ಅವರಿಗೆ ಬರೆದ ಪತ್ರಕ್ಕೆ ಪ್ರತಿಕ್ರಿಯೆಯಾಗಿ, ಆರ್.ಎಸ್.ಎಸ್ ಸ್ವಯಂಸೇವಕರಾಗಿರುವ ರಾಜ್ಯ ಸಭಾ ಸಂಸದರಾದ ನಾರಾಯಣಸಾ ಕೆ. ಭಾಂಡಗೆ ಬಾಗಲಕೋಟೆ ನಗರದಲ್ಲಿ
ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಸಂಸ್ಥೆಯನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಪ್ರಶ್ನೆಗಳು ಸತ್ಯಾಂಶ, ಸಂವಿಧಾನಾತ್ಮಕ ಮೌಲ್ಯಗಳು ಹಾಗೂ ಎಲ್ಲರಿಗೂ ಅನ್ವಯಿಸುವ ಸಮಾನ ಮಾನದಂಡಗಳ ಆಧಾರದ ಮೇಲೆ ಇರಬೇಕು ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ರಾಜಕೀಯ ಪೂರ್ವಗ್ರಹ ಅಥವಾ ಆಯ್ದ ಗುರಿತಟ್ಟುವಿಕೆಯ ಮೂಲಕ ಒಂದು ಸಂಸ್ಥೆಯ ಅಸ್ತಿತ್ವವನ್ನು ಪ್ರಶ್ನಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆರ್.ಎಸ್.ಎಸ್ ತನ್ನ ಶತಮಾನೋತ್ಸವದ ಪಯಣದ ಸಂದರ್ಭದಲ್ಲಿ ದೇಶದ ವಿವಿಧ ಸಂಕಷ್ಟದ ಸಮಯಗಳಲ್ಲಿ ಸಲ್ಲಿಸಿದ ಸೇವೆಯನ್ನು ಉಲ್ಲೇಖಿಸಿರುವ ಸಂಸದರು, ಪ್ರವಾಹ, ಭೂಕಂಪ, ಚಂಡಮಾರುತ, ಸಾಂಕ್ರಾಮಿಕ ರೋಗಗಳಂತಹ ಸಂದರ್ಭಗಳಲ್ಲಿ ಸ್ವಯಂಸೇವಕರು ರಕ್ಷಣಾ ಕಾರ್ಯ, ಆಹಾರ ವಿತರಣೆ, ವೈದ್ಯಕೀಯ ನೆರವು ಹಾಗೂ ಪುನರ್ವಸತಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಜಾತಿ, ಧರ್ಮ, ಭಾಷೆಯ ಭೇದವಿಲ್ಲದೆ ಮಾನವೀಯ ಸೇವೆ ಸಲ್ಲಿಸಿರುವುದು ಸಂಘದ ಸೇವಾ ಪರಂಪರೆಯ ಭಾಗವಾಗಿದೆ ಎಂದು ಅವರು ತಿಳಿಸಿದ್ದಾರೆ.
1963ರ ಗಣರಾಜ್ಯೋತ್ಸವ ಪಥಸಂಚಲನದ ಉಲ್ಲೇಖ
ಚೀನಾ ದಾಳಿಯ ನಂತರದ ರಾಷ್ಟ್ರೀಯ ಸಂಕಷ್ಟದ ಸಂದರ್ಭದಲ್ಲಿ ಆರ್.ಎಸ್.ಎಸ್ ಸ್ವಯಂಸೇವಕರ ಶಿಸ್ತು ಮತ್ತು ದೇಶಸೇವೆಯನ್ನು ಪರಿಗಣಿಸಿ, ಅಂದಿನ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರು 1963ರ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಆರ್.ಎಸ್.ಎಸ್ ಗೆ ಅವಕಾಶ ನೀಡಿದ್ದನ್ನು ಸಂಸದರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ರಾಷ್ಟ್ರಹಿತಕ್ಕಾಗಿ ಸೇವೆ ಸಲ್ಲಿಸುವವರನ್ನು ಗೌರವಿಸುವುದು ಭಾರತದ ಪ್ರಜಾಪ್ರಭುತ್ವದ ಪರಂಪರೆಯಾಗಿದೆ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಸಮಾನತೆ ಕುರಿತು ಪ್ರತಿಪಾದನೆ
ಡಾ. ಬಾಬಾಸಾಹೇಬ ಅಂಬೇಡ್ಕರ್ ಸೇರಿದಂತೆ ಹಲವು ಗಣ್ಯರು ಸಾಮಾಜಿಕ ಸಮಾನತೆ ಮತ್ತು ಅಸ್ಪೃಶ್ಯತೆ ನಿರ್ಮೂಲನೆಯ ಅಗತ್ಯವನ್ನು ಪ್ರತಿಪಾದಿಸಿದ್ದರು. ಆರ್.ಎಸ್.ಎಸ್ ತನ್ನ ಕಾರ್ಯಪದ್ಧತಿಯ ಮೂಲಕ ಸಮಾಜದ ವಿವಿಧ ವರ್ಗಗಳನ್ನು ಒಗ್ಗೂಡಿಸುವ ಪ್ರಯತ್ನ ನಡೆಸಿದೆ ಎಂದು ಅದರ ಬೆಂಬಲಿಗರು ಹೇಳುತ್ತಾರೆ ಎಂದು ನಾರಾಯಣಸಾ ಭಾಂಡಗೆ ತಿಳಿಸಿದ್ದಾರೆ.
ಹಲವು ಗಣ್ಯರು ಮತ್ತು ಸಾರ್ವಜನಿಕ ವ್ಯಕ್ತಿಗಳು ಆರ್.ಎಸ್.ಎಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅದರ ಶಿಸ್ತು, ವ್ಯಕ್ತಿತ್ವ ನಿರ್ಮಾಣ ಮತ್ತು ರಾಷ್ಟ್ರಭಕ್ತಿಯ ಮೌಲ್ಯಗಳನ್ನು ಮೆಚ್ಚಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.
ನಿಷೇಧ ಮತ್ತು ಕಾನೂನು ಪ್ರಕ್ರಿಯೆ ಕುರಿತು ಪ್ರತಿಕ್ರಿಯೆ
ಆರ್.ಎಸ್.ಎಸ್ ಮೇಲೆ ವಿವಿಧ ಸಂದರ್ಭಗಳಲ್ಲಿ ನಿಷೇಧ ಹೇರಲಾಗಿದ್ದರೂ, ನಂತರದ ಕಾನೂನು ಮತ್ತು ನ್ಯಾಯಾಂಗ ಪ್ರಕ್ರಿಯೆಗಳ ಬಳಿಕ ಸಂಘವು ತನ್ನ ಚಟುವಟಿಕೆಗಳನ್ನು ಮುಂದುವರಿಸಿದೆ ಎಂದು ಸಂಸದರು ಹೇಳಿದ್ದಾರೆ.
ಕೇವಲ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಕಾರಣಕ್ಕೆ ಒಂದು ಸಂಘಟನೆಯ ಅಸ್ತಿತ್ವವನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ತತ್ವಗಳಿಗೆ ಹೊಂದುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಎಲ್ಲಾ ಸಂಘಟನೆಗಳಿಗೂ ಒಂದೇ ಮಾನದಂಡ ಅನ್ವಯಿಸಬೇಕು
ಕಾಂಗ್ರೆಸ್ ಪಕ್ಷವು ಹಿಂದೂ ಸಂಘಟನೆಗಳನ್ನೇ ನಿರಂತರವಾಗಿ ಗುರಿಯಾಗಿಸುತ್ತಿದೆಯೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ ಎಂದು ನಾರಾಯಣಸಾ ಭಾಂಡಗೆ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ನಡೆದ ವಿವಿಧ ಹಿಂಸಾತ್ಮಕ ಘಟನೆಗಳು, ಪೊಲೀಸ್ ಸಿಬ್ಬಂದಿ ಮತ್ತು ಸಾರ್ವಜನಿಕ ಆಸ್ತಿಗಳ ಮೇಲಿನ ದಾಳಿಗಳ ಕುರಿತು ಸಮಾನ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಬೇಕಿತ್ತು ಎಂದು ಅವರು ಹೇಳಿದ್ದಾರೆ.
ಯಾವುದೇ ಹತ್ಯೆ, ಹಿಂಸಾಚಾರ ಅಥವಾ ಅತಿರೇಕದ ಚಟುವಟಿಕೆಗಳನ್ನು ಪಕ್ಷಪಾತವಿಲ್ಲದೆ ಖಂಡಿಸಬೇಕು. ನ್ಯಾಯವು ವ್ಯಕ್ತಿಯ ರಾಜಕೀಯ ಅಥವಾ ಸೈದ್ಧಾಂತಿಕ ಹಿನ್ನೆಲೆಯ ಆಧಾರದ ಮೇಲೆ ಬದಲಾಗಬಾರದು ಎಂದು ಅವರು ಒತ್ತಿ ಹೇಳಿದ್ದಾರೆ.
ನಿಜವಾದ ಧರ್ಮನಿರಪೇಕ್ಷತೆ ಎಂದರೆ ಸಮಾನ ನ್ಯಾಯ
ನಿಜವಾದ ಧರ್ಮನಿರಪೇಕ್ಷತೆ ಎಂದರೆ ಯಾವುದೇ ಒಂದು ಸಮುದಾಯ ಅಥವಾ ಸಂಘಟನೆಯ ಬಗ್ಗೆ ಮಾತ್ರ ಅನುಮಾನ ವ್ಯಕ್ತಪಡಿಸುವುದಲ್ಲ. ಕಾನೂನಿನ ಮುಂದೆ ಎಲ್ಲರಿಗೂ ಸಮಾನ ಮಾನದಂಡ ಅನ್ವಯಿಸುವುದೇ ನಿಜವಾದ ಧರ್ಮನಿರಪೇಕ್ಷತೆ ಎಂದು ಅವರು ಹೇಳಿದ್ದಾರೆ.
ಸಂವಿಧಾನವು ಯಾವುದೇ ಸಂಘಟನೆ ಕಾನೂನು ಉಲ್ಲಂಘಿಸಿದರೆ ತನಿಖೆ ನಡೆಸಲು ಮತ್ತು ಕ್ರಮ ಕೈಗೊಳ್ಳಲು ವ್ಯವಸ್ಥೆಗಳನ್ನು ಕಲ್ಪಿಸಿದೆ. ಆದರೆ ರಾಜಕೀಯ ಉದ್ದೇಶದಿಂದ ಒಂದು ಸಂಘಟನೆಯನ್ನು ಮಾತ್ರ ಗುರಿಯಾಗಿಸುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಮಾಜದಲ್ಲಿ ವಿಭಜನೆ ಉಂಟುಮಾಡುವ ರಾಜಕೀಯ ಕ್ರಮಗಳ ಬದಲಾಗಿ ನ್ಯಾಯ, ಸಮಾನತೆ ಮತ್ತು ನಿಷ್ಪಕ್ಷಪಾತತೆಯ ತತ್ವಗಳನ್ನು ಅನುಸರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ರಾಷ್ಟ್ರ ನಿರ್ಮಾಣಕ್ಕೆ ಸೇವೆ ಸಲ್ಲಿಸಿದ ಸಂಸ್ಥೆಗಳ ಕೊಡುಗೆಯನ್ನು ಗೌರವಿಸುವುದರ ಜೊತೆಗೆ, ಯಾವುದೇ ರೀತಿಯ ಅತಿರೇಕ, ಹಿಂಸಾಚಾರ ಮತ್ತು ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಪಕ್ಷಪಾತವಿಲ್ಲದೆ ಕ್ರಮ ಕೈಗೊಳ್ಳುವುದೇ ಸಂವಿಧಾನಾತ್ಮಕ ಕರ್ತವ್ಯವಾಗಿದೆ ಎಂದು ರಾಜ್ಯಸಭಾ ಸಂಸದರಾದ ನಾರಾಯಣಸಾ ಕೆ. ಭಾಂಡಗೆ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande