
ವಿಜಯಪುರ, 16 ಜೂನ್ (ಹಿ.ಸ.) :
ಆಂಕರ್ : ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಕೊರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಶಾಸಕ ಅಶೋಕ ಮನಗೂಳಿ ಅವರು ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಅಡುಗೆ ಕೋಣೆಯನ್ನು ಉದ್ಘಾಟಿಸಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಮೂಲಸೌಕರ್ಯಗಳು ಅತ್ಯಂತ ಅಗತ್ಯವಾಗಿದ್ದು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ನೂತನ ಅಡುಗೆ ಕೋಣೆಯಿಂದ ಶಾಲೆಯ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಮತ್ತಷ್ಟು ಸುಗಮವಾಗಲಿದ್ದು, ವಿದ್ಯಾರ್ಥಿಗಳಿಗೆ ಸ್ವಚ್ಛ ಹಾಗೂ ಸುರಕ್ಷಿತ ವಾತಾವರಣದಲ್ಲಿ ಆಹಾರ ತಯಾರಿಸಲು ಅನುಕೂಲವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಶಾಲೆಯ ವಿವಿಧ ಸಮಸ್ಯೆಗಳ ಕುರಿತು ಶಾಸಕರ ಗಮನ ಸೆಳೆದರು. ವಿಶೇಷವಾಗಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಶಾಲೆಗೆ ಸುಸಜ್ಜಿತ ಕಾಂಪೌಂಡ್ ಅಗತ್ಯವಿರುವ ಬಗ್ಗೆ ಮನವಿ ಸಲ್ಲಿಸಿದರು.
ಮನವಿಗೆ ಸ್ಪಂದಿಸಿದ ಶಾಸಕ ಅಶೋಕ ಮನಗೂಳಿ ಅವರು, ಶಾಲೆಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದಾಗಿ ಹಾಗೂ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಶಾಲೆಯ ಸೌಂದರ್ಯೀಕರಣದ ದೃಷ್ಟಿಯಿಂದ ಸುಸಜ್ಜಿತ ಕಾಂಪೌಂಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಪಡೆಯಲು ಅನುಕೂಲ ಮಾಡಿಕೊಡುವುದು ತಮ್ಮ ಆದ್ಯತೆಯಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಗ್ರಾಮ ಪಂಚಾಯಿತಿ ಸದಸ್ಯರು, ಎಸ್ಡಿಎಂಸಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande