
ಗದಗ, 16 ಜೂನ್ (ಹಿ.ಸ.) :
ಆ್ಯಂಕರ್ : ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಗದಗ ಕ್ಷೇತ್ರದ ಶಾಸಕ ಹಾಗೂ ಕಾಂಗ್ರೆಸ್ನ ಹಿರಿಯ ನಾಯಕ ಎಚ್.ಕೆ. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಮಂಗಳವಾರ ಗದಗ ನಗರದಲ್ಲಿ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಮಹಿಳೆಯರು ಬೃಹತ್ ಪ್ರತಿಭಟನೆ ನಡೆಸಿದರು.
ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ನಗರದಲ್ಲಿ ನಡೆದ ಪ್ರತಿಭಟನಾ ರ್ಯಾಲಿ ಕೆಲಕಾಲ ಉದ್ವಿಗ್ನ ವಾತಾವರಣಕ್ಕೂ ಕಾರಣವಾಯಿತು.
ನಗರದ ಕಾಟನ್ ಸೇಲ್ ಸೊಸೈಟಿ ಆವರಣದಿಂದ ಆರಂಭವಾದ ಪ್ರತಿಭಟನಾ ರ್ಯಾಲಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಭಾಗವಹಿಸಿದರು. “ಎಚ್.ಕೆ. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಲೇಬೇಕು”, “ಗದಗ ಜಿಲ್ಲೆಗೆ ನ್ಯಾಯ ದೊರಕಬೇಕು” ಎಂಬ ಘೋಷಣೆಗಳನ್ನು ಕೂಗುತ್ತ ಪ್ರತಿಭಟನಾಕಾರರು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.
ಕಾಟನ್ ಸೇಲ್ ಸೊಸೈಟಿಯಿಂದ ಹೊರಟ ರ್ಯಾಲಿಯು ಗಾಂಧಿ ಸರ್ಕಲ್, ಟಾಂಗಾ ಕೂಟ ಮಾರ್ಗವಾಗಿ ಮುಳಗುಂದ ನಾಕಾದವರೆಗೆ ಸಾಗಿತು. ಮಾರ್ಗದುದ್ದಕ್ಕೂ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತ ರಾಜ್ಯ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರ್ಯಾಲಿಯ ವೇಳೆ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಕುತೂಹಲದಿಂದ ಪ್ರತಿಭಟನೆಯನ್ನು ವೀಕ್ಷಿಸಿದರು.
ಮುಳಗುಂದ ನಾಕಾದಲ್ಲಿ ಸಾವಿರಾರು ಕಾರ್ಯಕರ್ತರು ಜಮಾವಣೆಗೊಂಡು ತಮ್ಮ ಆಕ್ರೋಶವನ್ನು ತೀವ್ರಗೊಳಿಸಿದರು. ಕೆಲ ಪ್ರತಿಭಟನಾಕಾರರು ರಸ್ತೆ ಮಧ್ಯೆ ಟೈಯರ್ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಮುಂದಾದರು.
ಟೈಯರ್ಗಳಿಗೆ ಬೆಂಕಿ ಹಚ್ಚಿದ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ನೂಕಾಟ-ತಳ್ಳಾಟವೂ ನಡೆಯಿತು. ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳದಂತೆ ಪೊಲೀಸರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಬೆಂಕಿ ನಂದಿಸಲು ಕ್ರಮ ಕೈಗೊಂಡರು. ಬಳಿಕ ನೀರು ಹಾಕಿ ಬೆಂಕಿಯನ್ನು ಸಂಪೂರ್ಣ ನಂದಿಸಲಾಯಿತು. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾದರು.
ಪ್ರತಿಭಟನೆಯ ವೇಳೆ ಮಹಿಳಾ ಕಾರ್ಯಕರ್ತೆಯರು ಸಹ ಭಾವನಾತ್ಮಕವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಎಚ್.ಕೆ. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಕೆಲ ಮಹಿಳೆಯರು ಬಾಯಿ ಬಾಯಿ ಬಡಿದುಕೊಂಡು ಆಕ್ರೋಶ ಹೊರಹಾಕಿದರು.
ಗದಗ ಜಿಲ್ಲೆಯ ಅಭಿವೃದ್ಧಿಗೆ ಎಚ್.ಕೆ. ಪಾಟೀಲ್ ಅವರ ಸೇವೆ ಅನನ್ಯವಾಗಿದ್ದು, ಅವರಿಗೆ ಸಚಿವ ಸ್ಥಾನ ನೀಡದೇ ಇರುವುದು ಜಿಲ್ಲೆಯ ಜನತೆಗೆ ಮಾಡಿದ ಅನ್ಯಾಯ ಎಂದು ಅವರು ಆರೋಪಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮುಖಂಡರು, ಎಚ್.ಕೆ. ಪಾಟೀಲ್ ಅವರು ಪ್ರಾಮಾಣಿಕ, ದಕ್ಷ ಹಾಗೂ ಅನುಭವಿ ರಾಜಕಾರಣಿಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇಂತಹ ಹಿರಿಯ ನಾಯಕನನ್ನು ಸಚಿವ ಸಂಪುಟದಿಂದ ಹೊರಗಿಡುವುದು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಗದಗ ಜಿಲ್ಲೆಗೆ ಮಾಡಿದ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಜನರ ಭಾವನೆಗಳನ್ನು ಗೌರವಿಸಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ತಕ್ಷಣವೇ ಎಚ್.ಕೆ. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಸೇರಿದಂತೆ ವಿವಿಧ ಹಂತದ ಹೋರಾಟಗಳನ್ನು ಹಮ್ಮಿಕೊಳ್ಳುವ ಕುರಿತು ಪ್ರತಿಭಟನಾಕಾರರು ಘೋಷಿಸಿದರು.
ಒಟ್ಟಾರೆ, ಎಚ್.ಕೆ. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ನಡೆದ ಈ ಬೃಹತ್ ಪ್ರತಿಭಟನೆ ಗದಗ ಜಿಲ್ಲೆಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಈ ಪ್ರತಿಭಟನೆಗೆ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP