ಕೃಷ್ಣಾ ಮೇಲ್ದಂಡೆ ಯೋಜನೆ ; ಚಿಚಖಂಡಿ ಗ್ರಾಮದಲ್ಲಿ ಭೂಸ್ವಾಧೀನ ಕುರಿತು ಗ್ರಾಮಸಭೆ
ನಾನಾ
Sabhe


ಬಾಗಲಕೋಟೆ, 16 ಜೂನ್ (ಹಿ.ಸ.) :

ಆಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಚಿಚಖಂಡಿ ಗ್ರಾಮದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಅಡಿಯಲ್ಲಿ ಭೂಸ್ವಾಧೀನವಾಗುತ್ತಿರುವ ಜಮೀನುಗಳಿಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹಂತದಲ್ಲಿ ಒಪ್ಪಿಗೆ ಐತೀರ್ಪು (Consent Award) ಪಡೆಯುವ ಉದ್ದೇಶದಿಂದ ವಿಶೇಷ ಗ್ರಾಮಸಭೆಯನ್ನು ಆಯೋಜಿಸಲಾಯಿತು.

ವಿಶೇಷ ಭೂಸ್ವಾಧೀನಾಧಿಕಾರಿಗಳ ಕಾರ್ಯಾಲಯ, ಜಮಖಂಡಿ ಇವರ ವತಿಯಿಂದ ಗ್ರಾಮ ಸಭೆ ನಡೆಸಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆಯ ನಾನಾ ಹಂತಗಳು, ರೈತರಿಗೆ ದೊರೆಯುವ ಪರಿಹಾರ, ಒಪ್ಪಿಗೆ ಐತೀರ್ಪಿನ ಮಹತ್ವ ಹಾಗೂ ಸಂಬಂಧಿಸಿದ ನಿಯಮಗಳ ಕುರಿತು ಅಧಿಕಾರಿಗಳು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಸ್ವಾಧೀನವಾಗುತ್ತಿರುವ ಜಮೀನುಗಳ ಮಾಲೀಕರೊಂದಿಗೆ ಸಮಾಲೋಚನೆ ನಡೆಸಿ, ಅವರ ಅಭಿಪ್ರಾಯ ಹಾಗೂ ಸಮ್ಮತಿಯನ್ನು ಪಡೆಯುವ ಕಾರ್ಯ ನಡೆಯಿತು.

ಭೂಸ್ವಾಧೀನಕ್ಕೆ ಸಂಬಂಧಿಸಿದ ದಾಖಲೆಗಳು, ಪರಿಹಾರ ಮೊತ್ತ ನಿಗದಿ, ರೈತರ ಹಕ್ಕುಗಳು ಮತ್ತು ಸರ್ಕಾರದ ಮಾರ್ಗಸೂಚಿಗಳ ಕುರಿತು ಅಧಿಕಾರಿಗಳು ವಿವರಿಸಿದರು.

ಗ್ರಾಮಸಭೆಯಲ್ಲಿ ರೈತರು ತಮ್ಮ ಸಮಸ್ಯೆಗಳು, ಅನುಮಾನಗಳು ಹಾಗೂ ಬೇಡಿಕೆಗಳನ್ನು ಅಧಿಕಾರಿಗಳ ಮುಂದೆ ಮಂಡಿಸಿದರು. ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕ ಪ್ರಕ್ರಿಯೆ ಅನುಸರಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯು ಈ ಭಾಗದ ನೀರಾವರಿ ಹಾಗೂ ಅಭಿವೃದ್ಧಿಗೆ ಮಹತ್ವದ ಯೋಜನೆಯಾಗಿದ್ದು, ಯೋಜನೆ ಅನುಷ್ಠಾನಕ್ಕಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರ ಸಹಕಾರ ಅಗತ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಗ್ರಾಮಸಭೆಯ ಮೂಲಕ ಭೂಸ್ವಾಧೀನ ಪ್ರಕ್ರಿಯೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಚರ್ಚೆಗಳು ನಡೆದಿದ್ದು, ರೈತರ ಸಮ್ಮತಿಯೊಂದಿಗೆ ಮುಂದಿನ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande