
ಬಾಗಲಕೋಟೆ, 16 ಜೂನ್ (ಹಿ.ಸ.) :
ಆಂಕರ್ : ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಸೋಮನಕೊಪ್ಪ ಗ್ರಾಮದಲ್ಲಿ ವಿಶ್ವ ಶಾಂತಿ, ಸೌಹಾರ್ದತೆ ಹಾಗೂ ಮಾನವ ಕಲ್ಯಾಣದ ಉದ್ದೇಶದಿಂದ ಆಯೋಜಿಸಲಾಗಿದ್ದ ಕೋಟಿ ಜಪ ಯಜ್ಞದ ಮುಕ್ತಾಯ ಕಾರ್ಯಕ್ರಮ ಭಕ್ತಿಭಾವ ಹಾಗೂ ಆಧ್ಯಾತ್ಮಿಕ ವಾತಾವರಣದಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ಬಾದಾಮಿ ಮತಕ್ಷೇತ್ರದ ಶಾಸಕರಾದ ಚಿಮ್ಮನಕಟ್ಟಿ ಅವರು ಭಾಗವಹಿಸಿ, ಪರಮಪೂಜ್ಯ ಶ್ರೀ ಪೂರ್ಣಾನಂದ ಮಹಾಸ್ವಾಮಿಗಳು ಹಾಗೂ ಪರಮಪೂಜ್ಯ ಶ್ರೀ ಶ್ರದ್ಧಾನಂದ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯ ಮತ್ತು ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ವಿಶ್ವದಲ್ಲಿ ಶಾಂತಿ, ಸೌಹಾರ್ದತೆ, ಸುಖ-ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದರು.
ನಂತರ ಮಾತನಾಡಿದ ಶಾಸಕರು, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಉತ್ತಮ ಚಿಂತನೆ, ಮಾನವೀಯ ಮೌಲ್ಯಗಳು ಮತ್ತು ಪರಸ್ಪರ ಸಹಬಾಳ್ವೆಯ ಭಾವನೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಇಂತಹ ಕಾರ್ಯಕ್ರಮಗಳು ಜನರಲ್ಲಿ ಭಕ್ತಿ, ಶಾಂತಿ ಮತ್ತು ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಸಾರುತ್ತವೆ ಎಂದು ಅಭಿಪ್ರಾಯಪಟ್ಟರು.
ಪರಮಪೂಜ್ಯ ಶ್ರೀ ಪೂರ್ಣಾನಂದ ಮಹಾಸ್ವಾಮಿಗಳು ಹಾಗೂ ಪರಮಪೂಜ್ಯ ಶ್ರೀ ಶ್ರದ್ಧಾನಂದ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ನಡೆದ ಈ ಮಹಾಯಜ್ಞವು ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯಿಂದ ಯಶಸ್ವಿಯಾಗಿ ಪೂರ್ಣಗೊಂಡಿತು. ಯಜ್ಞದ ಮೂಲಕ ಭಕ್ತರಲ್ಲಿ ಆಧ್ಯಾತ್ಮಿಕ ಚೈತನ್ಯ, ಧಾರ್ಮಿಕ ನಂಬಿಕೆ ಹಾಗೂ ಶಾಂತಿಯ ಸಂದೇಶ ಮೂಡಿಬಂದಿತು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರು, ಭಕ್ತಾದಿಗಳು, ವಿವಿಧ ಗಣ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದು, ಮಹಾಯಜ್ಞದ ಸಮಾರೋಪ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಹಿಂದೂಸ್ತಾನ್ ಸಮಾಚಾರ್ / jyothi deshpande