ಸಚಿವ ಸ್ಥಾನಕ್ಕಾಗಿ ಇಂಡಿ ಜನರ ಬೃಹತ್ ಹೋರಾಟ ; ಬೆಂಗಳೂರಿನ ಪ್ರತಿಭಟನೆಗೆ 16 ಬಸ್ ಗಳಲ್ಲಿ ಅಭಿಮಾನಿಗಳ ಪ್ರಯಾಣ
ಅಭಿಮಾನಿ ಗ
Bus


ವಿಜಯಪುರ, 16 ಜೂನ್ (ಹಿ.ಸ.) :

ಆಂಕರ್ : ವಿಜಯಪುರ ಜಿಲ್ಲೆಯ ಇಂಡಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ನೂತನ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ, ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲು ಇಂಡಿ ಕ್ಷೇತ್ರದಿಂದ ನೂರಾರು ಅಭಿಮಾನಿಗಳು ಹಾಗೂ ಬೆಂಬಲಿಗರು ಪ್ರಯಾಣ ಬೆಳೆಸಿದರು.

ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಇಂಡಿ ಕ್ಷೇತ್ರದ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದು, ಈ ಆಗ್ರಹವನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಕ್ಷೇತ್ರದ ವಿವಿಧ ಗ್ರಾಮಗಳಿಂದ ಜನರು ಬೆಂಗಳೂರಿನತ್ತ ತೆರಳುತ್ತಿದ್ದಾರೆ. ಸುಮಾರು 16 ಬಸ್ ಮೂಲಕ ಅಭಿಮಾನಿಗಳು ಪ್ರಯಾಣ ಆರಂಭಿಸಿದ್ದು, ಇದರೊಂದಿಗೆ ಹಲವಾರು ಜನರು ರೈಲು ಹಾಗೂ ಖಾಸಗಿ ವಾಹನಗಳ ಮೂಲಕ ಆಗಮಿಸಿ ಪ್ರತಿಭಟನೆಯಲ್ಲಿ ಇಂದು ಪಾಲ್ಗೊಳ್ಳಲಿದ್ದಾರೆ.

ಈ ಕುರಿತು ಮಾತನಾಡಿದ ಅಭಿಮಾನಿಗಳು, ಯಶವಂತರಾಯಗೌಡ ಪಾಟೀಲ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಧೀಮಂತ ನಾಯಕರು. ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಕ್ಷೇತ್ರದ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರಿಗೆ ಸಚಿವ ಸ್ಥಾನ ನೀಡುವುದು ನ್ಯಾಯಯುತವಾಗಿದೆ. ಈ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವ ಸಲುವಾಗಿ ಬೆಂಗಳೂರಿನಲ್ಲಿ ನಡೆಯುವ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದೇವೆ” ಎಂದು ಹೇಳಿದರು.

ಇಂಡಿ ಕ್ಷೇತ್ರದ ಜನರ ಒಗ್ಗಟ್ಟಿನ ಧ್ವನಿ ಇಂದು ರಾಜಧಾನಿ ಬೆಂಗಳೂರಿನಲ್ಲಿ ಮೊಳಗಲಿದ್ದು, ಸರ್ಕಾರವು ಕ್ಷೇತ್ರದ ಜನಾಭಿಪ್ರಾಯವನ್ನು ಪರಿಗಣಿಸಿ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಲಾಗುವುದು ಎಂದು ಅಭಿಮಾನಿಗಳು ತಿಳಿಸಿದ್ದಾರೆ.

ಕ್ಷೇತ್ರದ ನಾಯಕತ್ವಕ್ಕೆ ಹೆಚ್ಚಿನ ಜವಾಬ್ದಾರಿ ನೀಡಬೇಕು ಎಂಬ ನಿರೀಕ್ಷೆಯೊಂದಿಗೆ ನಡೆಯುತ್ತಿರುವ ಈ ಪ್ರತಿಭಟನೆಗೆ ಇಂಡಿ ತಾಲೂಕಿನ ವಿವಿಧ ಭಾಗಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಸಚಿವ ಸ್ಥಾನಕ್ಕಾಗಿ ನಡೆಯುತ್ತಿರುವ ಈ ಹೋರಾಟ ರಾಜಕೀಯ ವಲಯದಲ್ಲಿಯೂ ಗಮನ ಸೆಳೆದಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande